ರಿಯಾದ್: ಮಕ್ಕಾ-ಮದೀನಾ ಹರಮೈನ್ ರೈಲು ಸೇವೆ ಬುಧವಾರ ಪುನರಾರಂಭಗೊಳ್ಳಲಿದೆ. ಮುಂಬರುವ ಹಜ್‌ಗೆ ಮುಂಚಿತವಾಗಿ ರೈಲು ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ ಎಂದು ಅಂದಾಜಿಸಲಾಗಿದೆ.
ಆರಂಭದಲ್ಲಿ ದಿನಕ್ಕೆ 24 ರಿಂದ 30 ಸೇವೆಗಳು ಇರುತ್ತವೆ. ರಂಜಾನ್ ಹಬ್ಬದೊಂದಿಗೆ ಒಂದು ತಿಂಗಳಲ್ಲಿ ಸೇವೆಗಳ ಸಂಖ್ಯೆಯನ್ನು ದಿನಕ್ಕೆ 40 ರಿಂದ 54 ಸೇವೆಗಳಿಗೆ ಹೆಚ್ಚಿಸಲು ಕ್ರಮವಹಿಸಲಾಗಿದೆ. ಸೇವೆಯ ಪುನರಾರಂಭವು ಪವಿತ್ರ ತಿಂಗಳಲ್ಲಿ ಎರಡೂ ಹರಮ್ ಗಳಲ್ಲಿ ಪ್ರಾರ್ಥನೆ ನಡೆಸಲು ಆಗಮಿಸುವ ವಿಶ್ವಾಸಿಗಳಿಗೆ ಹೆಚ್ಚಿನ ಸಮಾಧಾನವನ್ನು ನೀಡಲಿದೆ.
ಬೆಂಕಿ ಆಕಸ್ಮಿಕ ಹಿನ್ನೆಲೆಯಲ್ಲಿ ಜಿದ್ದಾದ ಸುಲೈಮಾನಿಯಾ ರೈಲು ನಿಲ್ದಾಣ ನವೀಕರಣಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ, ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣವನ್ನು ಜಿದ್ದಾದ ಪ್ರಯಾಣಿಕರು ಬಳಸಬೇಕು. ಸುಲೈಮಾನಿಯಾ ನಿಲ್ದಾಣವು ಶೀಘ್ರದಲ್ಲೇ ಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. 700 ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ನವೀಕರಣ ಕಾರ್ಯದಲ್ಲಿ ತೊಡಗಿದ್ದಾರೆ.