ನವದೆಹಲಿ: ದೇಶಿ ವಿಮಾನ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಹೌದು, ದೇಶಿಯ ವಿಮಾನದಲ್ಲಿ ಚೆಕ್ಇನ್ ಬ್ಯಾಗೇಜ್ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರ ದರದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರದಂದು ಅನುಮತಿ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.
ಕೊರೋನಾ ಸೋಂಕಿನಿಂದಾಗಿ ವಿಮಾನಯಾನ ಸ್ಥಗಿತಗೊಳಿಸಿದ ಬಳಿಕ ಪ್ರಯಾಣಿಕರನ್ನು ಆಕರ್ಷಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮುಂದಾಗಿದೆ. ಕೊರೋನಾ ಸೋಂಕಿನ ನಡುವೆ ಮುಂಜಾಗ್ರತಾ ಕ್ರಮಗಳೊಂದಿಗೆ ಮೊದಲಿಗೆ ಶೇ.45ರಷ್ಟು ಪ್ರಯಾಣಿಕರೊಂದಿಗೆ ಹಾರಾಟ ನಡೆಸುತ್ತಿದ್ದ ವಿಮಾನಗಳು ಇದೀಗ ಶೇ.80ರಷ್ಟು ಪ್ರಯಾಣಿಕರೊಂದಿಗೆ ವಿಮಾನ ಹಾರಾಟ ನಡೆಸುತ್ತಿವೆ.
7 ಕೆ.ಜಿ ತೂಕದವರೆಗೂ ಕ್ಯಾಬಿನ್ ಬ್ಯಾಗೇಜ್ ಉಚಿತ:
ಎಎನ್ಐ ವರದಿ ಪ್ರಕಾರ, ದೇಶಿಯ ಪ್ರಯಾಣಿಕರು 7 ಕೆ.ಜಿ ತೂಕದವರೆಗೂ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಅಷ್ಟೇ ಅಲ್ಲದೇ ಚೆಕ್-ಇನ್ ಬ್ಯಾಗೇಜ್ ಇಲ್ಲದೇ ಪ್ರಯಾಣಿಸುವವರು ಪ್ರಯಾಣಿಕರಿಗೆ ದೇಶಿಯ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅವಕಾಶ ಮಾಡಿಕೊಟ್ಟಿದೆ. ಆದರೆ, ಪ್ರಯಾಣಿಕರು ಪ್ರಯಾಣದ ವೇಳೆ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ತಮ್ಮ ಲಗೇಜ್ನ ಕುರಿತಾದ ಮಾಹಿತಿಯನ್ನು ನೀಡಬೇಕಾಗುತ್ತದೆ.
ಚೆಕ್ ಇನ್ ಬ್ಯಾಗೇಜ್ನಲ್ಲಿ 15 ಕೆಜಿಗೆ ಅವಕಾಶ
ಇನ್ನು, ಏರ್ಲೈನ್ಸ್ ನಿಯಮ ಪ್ರಕಾರ ದೇಶಿಯ ವಿಮಾನ ಪ್ರಯಾಣಿಕರಿಗೆ 15 ಕೆಜಿ ವರೆಗೆ ಚೆಕ್ ಇನ್ ಬ್ಯಾಗೇಜ್ನಲ್ಲಿ ಕೊಂಡೊಯ್ಯಲು ಅವಕಾಶವಿದೆ. ಇದಕ್ಕಿಂತ ಹೆಚ್ಚಿನ ಲಗೇಜ್ ಅನ್ನು ಪ್ರಯಾಣಿಕ ಹೊಂದಿದ್ದರೆ ಟಿಕೆಟ್ ಬುಕ್ಕಿಂಗ್ ವೇಳೆಯೇ ಪ್ರಯಾಣಿಕರಿಗೆ ಅವರ ಬ್ಯಾಗೇಜ್ ಮೇಲೆ ಶುಲ್ಕವನ್ನು ವಿಧಿಸಲಾಗುತ್ತದೆ. ಇದು, ಪ್ರಯಾಣಿಕರ ಟಿಕೆಟ್ನಲ್ಲಿ ಕೂಡ ಪ್ರಿಂಟ್ ಆಗಿರುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಮಾತನಾಡಿರುವ ಪ್ರಕಾರ, ದೇಶಿಯ ವಿಮಾನ ಪ್ರಯಾಣ ದರಗಳು ಒಂದೇ ರೀತಿಯಾಗಿ ಇರುವುದಿಲ್ಲ.ವಿಮಾನಯಾನ ಸಂಸ್ಥೆಗಳಿಗೆ ಕೊರೊನಾ ಸೋಂಕಿನ ಹಿನ್ನೆಲೆ ಮಾರ್ಚ್ 31ರ ವರೆಗೆ ಶೇ.80ರಷ್ಟು ಪ್ರಯಾಣಿಕರೊಂದಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದಿದ್ದಾರೆ.