janadhvani

Kannada Online News Paper

ಯುಪಿ:ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ಬಂಧಿತ ಬಿಜೆಪಿ ನಾಯಕನಿಗೆ ಹಲವು ಕ್ರಿಮಿನಲ್ ಹಿನ್ನೆಲೆ

ಜಲಾನ್, ಜನವರಿ 19: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಕಳೆದ ವಾರ ಉತ್ತರಪ್ರದೇಶದ ಬಿಜೆಪಿ ನಾಯಕ ರಾಮ್ ಬಿಹಾರಿ ರಾಥೋಡ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಗೆ ಗ್ರಾಸವಾಗಿತ್ತು.

ಆದರೆ, ಇದೀಗ ರಾಮ್ ಬಿಹಾರಿ ರಾಥೋಡ್ ವಿಚಾರಣೆ ನಡೆಸುತ್ತಿರುವ ಪೊಲೀಸರು ಹತ್ತು ಹಲವಾರು ಆಘಾತಕಾರಿ ಮಾಹಿತಿಗಳನ್ನು ಹೊರಗೆಡಹುತ್ತಿದ್ದಾರೆ. ಈತ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಹಲವಾರು ಕ್ರಿಮಿನಲ್ ಮತ್ತು ಸಮಾಜಘಾತುಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಮೇಲೆ ನಿರಂತರವಾಗಿ ನಡೆದ ಲೈಂಗಿಕ ದೌರ್ಜನ್ಯದ ಕುರಿತು ದೂರು ನೀಡಿದ ನಂತರ, ರಾಮ್ ಬಿಹಾರಿಯನ್ನು ಜನವರಿ 13 ರಂದು ಬಂಧಿಸಲಾಗಿತ್ತು. ಆಗಲೇ ಬಿಜೆಪಿ ಈತನನ್ನು ಉಚ್ಛಾಟನೆ ಮಾಡಿದೆ ಎಂದು ವರದಿಯಾಗಿದೆ.

ಬಂಧನದ ನಂತರ ಇನ್ನೊಂದು ದೂರು ದಾಖಲಾಗಿದೆ. ಇದಲ್ಲದೇ ಕಳೆದ 6-7 ವರ್ಷಗಳಿಂದ ರಾಮ್ ಬಿಹಾರಿ ರಾಠೋಡ್ ಹಲವಾರು ಕ್ರಿಮಿನಲ್ ದಂಧೆಗಳಲ್ಲಿ ನಿರತನಾಗಿದ್ದ ವಿವರಗಳು ಪೊಲೀಸರಿಗೆ ಲಭ್ಯವಾಗಿವೆ. ಜಲೌನ್ ಜಿಲ್ಲೆಯ ಕೊಂಚ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತನ್ನ ಮನೆಯಿಂದ ಈತ ಕ್ರಿಕೆಟ್ ಬೆಟ್ಟಿಂಗ್ ಜಾಲ ನಡೆಸುತ್ತಿದ್ದ ಎಂಬ ಆರೋಪವನ್ನು ಪೊಲೀಸರು ಮುಂದಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಂಚ್ ಠಾಣಾಧಿಕಾರಿ ಇಮ್ರಾನ್ ಖಾನ್, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಸಾಕ್ಷ್ಯ ಗಳನ್ನು ಕಲೆ ಹಾಕುತ್ತಿದ್ದೇವೆ. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯೂ ಪ್ರಕರಣ ದಾಖಲಿಸುವ ಚಿಂತನೆ ನಡೆದಿದೆ.

ಈತನ ವಿರುದ್ಧ ಇನ್ನೂ ಹಲವಾರು ಅಪ್ರಾಪ್ತ ಬಾಲಕರು ಮತ್ತು ಕೆಲವು ಮಹಿಳೆಯರು ಸಹ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲು ಮುಂದೆ ಬಂದಿದ್ದು, ಪೊಲೀಸರನ್ನು ಸಂರ್ಕಿಸಿದ್ದಾರೆ. ಹೀಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

error: Content is protected !! Not allowed copy content from janadhvani.com