ನವ ದೆಹಲಿ: ವಾಟ್ಸ್ಆ್ಯಪ್ ಇದೀಗ ಹೊಸ ನೀತಿಯನ್ನು ಜಾರಿಗೆ ತಂದಿದೆ. ಕಳೆದ ಮಂಗಳವಾರ (ಜ.5) ತನ್ನ ಬಳಕೆದಾರರಿಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ತಿಳಿಸಲು ನೋಟಿಫಿಕೇಶನ್ ಕಳುಹಿಸಿದೆ. ಅಲ್ಲದೆ, ವಾಟ್ಸ್ಆ್ಯಪ್ ನೋಟಿಫಿಕೇಶನ್ ಮೂಲಕ ಕಳುಹಿಸಿರುವ ಷರತ್ತುಗಳನ್ನು ಒಪ್ಪದೆ ಇದ್ದರೆ ಸ್ಮಾರ್ಟ್ಫೋನ್ನಲ್ಲಿದ್ದ ವಾಟ್ಸ್ಆ್ಯಪ್ ಡಿಲೀಟ್ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಇದೀಗ ವಾಟ್ಸ್ಆ್ಯಪ್ನ ಈ ನಿಯಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗೆ ಸಂದೇಶ, ಧ್ವನಿ, ಫೋಟೋ, ವಿಡಿಯೋ, ಫೈಲ್ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶ ನೀಡಿತ್ತು. ಅಲ್ಲದೆ, ಈ ಎಲ್ಲಾ ಸಂದೇಶಗಳ ಗೌಪ್ಯತೆಯನ್ನು ಕಾಪಾಡುವ ಕುರಿತು ಗ್ರಾಹಕರಿಗೆ ಸ್ಪಷ್ಟ ಭರವಸೆ ನೀಡಿತ್ತು.ಈ ಸೌಲಭ್ಯಗಳು ಕೋಟ್ಯಾಂತರ ಜನರಿಗೆ ಅನುಕೂಲವಾಗಿ ಪರಿಣಮಿಸಿತ್ತು. ವಾಟ್ಸ್ಆ್ಯಪ್ ಜನಪ್ರಿಯವಾಗಲು ಇದೂ ಒಂದು ಕಾರಣ.
ವಾಟ್ಸ್ಆ್ಯಪ್ನ ಹೊಸ ಗೌಪ್ಯತೆ ನೀತಿಯ ಪ್ರಕಾರ ವಾಟ್ಸ್ಆ್ಯಪ್ ತನ್ನ ಗ್ರಾಹಕರ ಸಂದೇಶ ಸೇರಿದಂತೆ ಯಾವುದೇ ವ್ಯಯಕ್ತಿಕ ಮಾಹಿತಿಯನ್ನು ಲಾಭಕ್ಕಾಗಿ ಮಾರಿಕೊಳ್ಳುವ ಅವಕಾಶವನ್ನು ಹೊಂದಿರುತ್ತದೆ ಎಂದು ಹೊಸ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಹೀಗಾಗಿ ವಾಟ್ಸ್ಆ್ಯಪ್ ತಂದಿರುವ ಈ ನಿರ್ಧಾರ ಸಾಕಷ್ಟು ಜನರಿಗೆ ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ ಕೆಲವರು ಬೇರೆ ಆ್ಯಪ್ಗಳತ್ತ ಮುಖ ಮಾಡಿದ್ದಾರೆ.
ಈ ನಡುವೆ ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯು ಬಳಕೆದಾರರ ಚಟುವಟಿಕೆಗಳನ್ನು ಪರಿಶೀಲಿಸಲು ಕಂಪನಿಗೆ ಅಧಿಕಾರ ನೀಡುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ವಕೀಲ ಚೈತನ್ಯ ರೋಹಿಲ್ಲಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ಅವರು ತಮ್ಮ ಅರ್ಜಿಯಲ್ಲಿ ವಾಟ್ಸ್ಆ್ಯಪ್ನ ಹೊಸ ಗೌಪ್ಯತೆ ನೀತಿಯು ವ್ಯಕ್ತಿಯ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗಿದೆ ಹೇಳಿದ್ದಾರೆ. ಖಾಸಗೀತನದ ಹಕ್ಕನ್ನು ಸುಪ್ರೀಂ ಕೋರ್ಟ್ ಸಹ ಮೂಲಭೂತ ಹಕ್ಕು ಎಂದು ಈಗಾಗಲೇ ಘೋಷಿಸಿದೆ.
ಅರ್ಜಿಯಲ್ಲಿ “ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಬಳಕೆದಾರರ ಡೇಟಾವನ್ನು ಮೂರನೇ ವ್ಯಕ್ತಿಯೊಂದಿಗೆ ಅನಧಿಕೃತ ರೀತಿಯಲ್ಲಿ ಹಂಚಿಕೊಳ್ಳುತ್ತಿವೆ. ಸರ್ಕಾರದಿಂದ ಅನುಮತಿ ಪಡೆಯದೆ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ರೂಪಿಸಲಾಗಿದೆ” ಎಂದು ಆರೋಪಿಸಲಾಗಿದೆ.
ಅರ್ಜಿದಾರರು ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿ ಮತ್ತು ವ್ಯಕ್ತಿಗಳ ಖಾಸಗಿ ಹಕ್ಕನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್ಆ್ಯಪ್ ಬಳಕೆಗೆ ಮಾರ್ಗಸೂಚಿಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.