janadhvani

Kannada Online News Paper

ವಖ್ಫ್ ಅನುದಾನ ದುರುಪಯೋಗ: ಶಾಫಿ ಸ‌ಅದಿ ವಿರುದ್ಧ ಸುಳ್ಳಾರೋಪ- ಸ್ಪಷ್ಟೀಕರಣ

ಬೆಂಗಳೂರು: 2004 ರಿಂದ ಕಾರ್ಯಾಚರಿಸುತ್ತಿರುವ, ಬೆಂಗಳೂರಿನ ಬನಶಂಕರಿ ಹಾಗೂ ಬನ್ನೇರುಘಟ್ಟಗಳಲ್ಲಿ ವಿವಿಧ ವಿದ್ಯಾಲಯಗಳನ್ನು ನಡೆಸುತ್ತಿರುವ ಬೆಂಗಳೂರು ಸ‌ಅದಿಯಾ ಎಜುಕೇಶನಲ್ ಫೌಂಡೇಂಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಶಾಫಿ ಸ‌ಅದಿಯವರು ವಖ್ಫ್ ಅನುದಾನ ದುರುಪಯೋಗ ಮಾಡಿದ್ದಾರೆಂಬ ಕೆಲವರ ಆರೋಪವು ಸತ್ಯಕ್ಕೆ ದೂರವಾದುದು ಎಂದು ಬೆಂಗಳೂರು ಸ‌ಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ.

ಶಾಫಿ ‌ಸ‌ಅದಿಯವರು ಮೊದಲ ಬಾರಿಗೆ ರಾಜ್ಯ ವಖ್ಫ್ ಬೋರ್ಡ್ ಗೆ ಸದಸ್ಯರಾಗಿದ್ದು 2011 ರಲ್ಲಿ.
ಅಲ್ಲಿಂದೀಚೆಗೆ ಎರಡು ಅವಧಿಗೆ ಅವರು ರಾಜ್ಯ ವಖ್ಫ್ ಸದಸ್ಯರಾಗಿದ್ದಾರೆ. ವಖ್ಫ್ ಬೋರ್ಡ್ ನಿಂದ ನಯಾಪೈಸೆಯ ಧನಸಹಾಯ ಈ ವರೆಗೂ ಸ‌ಅದಿಯಾ ಸಂಸ್ಥೆಗೆ ಬಂದಿರಲಿಲ್ಲ. ಸ್ಲಮ್ ಮಕ್ಕಳು ಸಹಿತ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಬೆಂಗಳೂರು ಸ‌ಅದಿಯಾ ಸಂಸ್ಥೆಯ ಬನ್ನೇರುಘಟ್ಟ ಶಾಖೆಯ ಮಸೀದಿ ಕಟ್ಟಡ ದುರಸ್ತಿಗೆ ಧನಸಹಾಯ ಒದಗಿಸಬೇಕೆಂದು ಕಳೆದ ವರ್ಷವಷ್ಟೇ ಅರ್ಜಿ ಸಲ್ಲಿಸಿದ್ದು.

ಸುಮಾರು ನಾಲ್ಕುವರೆ ಕೋಟಿ ರೂ ಮೌಲ್ಯದ ಮಸೀದಿ-ಮದ್ರಸ ಕಟ್ಟಡ ಹೊಂದಿರುವ ಬನ್ನೇರುಘಟ್ಟದ ಮಸೀದಿಯನ್ನು ವಖ್ಫ್ ಗೆ ನೋಂದಾಯಿಸಲಾಗಿದೆ. ಮಸೀದಿ ದುರಸ್ತಿ ಹಾಗೂ ಅಭಿವೃದ್ಧಿಗೆ ಅನುದಾನ ಬಯಸಿ ಸ‌ಅದಿಯಾ ಸಂಸ್ಥೆಯು ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಕಂಪೌಂಡ್ ನಿರ್ಮಾಣಕ್ಕೆಂದು ಸುಮಾರು 19 ಲಕ್ಷ ರೂಪಾಯಿ ಸರಕಾರದಿಂದ ಮಂಜೂರಾಗಿದ್ದು; ಅದರ ಮೊದಲ‌ ಕಂತು ಎಂಬಂತೆ ಐದು ಲಕ್ಷ ರೂ ಸ‌ಅದಿಯಾ ಆಡಳಿತ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಆಗಿದೆ.

ಅದೇ ಸಂದರ್ಭಕ್ಕೆ ಕೆಲವರಿಂದ ಆಕ್ಷೇಪ ಕೇಳಿಬಂತು. ಈ ಬಗ್ಗೆ ಮಾಹಿತಿ ಅರಿತ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಶಾಫಿ ಸ‌ಅದಿಯವರು ವಖ್ಫ್ ಬೋರ್ಡ್ ಸದಸ್ಯರೂ ಆಗಿರುವುವುದರಿಂದ,ಅವರೆ ಸ್ವತಃ ವಖ್ಫ್ ಬೋರ್ಡ್ ಸಿಇಓರನ್ನು ಸಂಪರ್ಕಿಸಿ ಆಕ್ಷೇಪಗಳ ಬಗ್ಗೆ ಇತ್ಯರ್ಥ ಆಗುವವರೆಗೆ ಅನುದಾನವನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ.

“ಈಗಾಗಲೇ ಕಂಪೌಂಡ್ ಇರುವ, ಬನ್ನೇರುಘಟ್ಟ ಮಸೀದಿಗೆ ಮತ್ತೊಮ್ಮೆ ಕಂಪೌಂಡ್ ನಿರ್ಮಾಣಕ್ಕೆಂದು ಅನುದಾನ ಸಲ್ಲಿಸಲಾಗಿದೆ” ಎಂದಾಗಿದೆ ದೂರುದಾರರ ಆರೋಪ. ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಈಗ ನಿರ್ಮಾಣವಾಗಿರುವುದು ಮಸೀದಿಯ ಮುಂಭಾಗ ಒಂದು ಬರೀ ಗೇಟ್ ಮಾತ್ರವಾಗಿದೆ. ಆ ಗೇಟ್ ನ ಹೊರಾವರಣದ ಜಮೀನು ಕೂಡ ಮಸೀದಿಯದ್ದಾಗಿದೆ. ಅದಕ್ಕೆ ಕಂಪೌಂಡ್ ನಿರ್ಮಾಣವಾಗಬೇಕಿದೆ. ತುಸು ತಗ್ಗಾಗಿರುವ ಜಮೀನು ಮಸೀದಿಯ ಹಿಂಭಾಗದಲ್ಲಿದ್ದು, ಅಲ್ಲಿ ಕೂಡ ಕಂಪೌಂಡ್ ಇಲ್ಲ. ಬಲಭಾಗದಲ್ಲೂ ಇಲ್ಲ. ಅಲ್ಲೆಲ್ಲಾ ಕಂಪೌಂಡ್ ನಿರ್ಮಾಣ ಅಗತ್ಯ ಇದೆ.

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಫೋಟೊ ಮಸೀದಿಯ ಎಡಭಾಗದಲ್ಲಿನ ತಡೆಗೋಡೆ ಮಾತ್ರ. ಮಸೀದಿಯ ಎಡಭಾಗದಲ್ಲಿ ಮಾತ್ರ ತಾತ್ಕಾಲಿಕ ತಡೆಗೋಡೆ ಇದೆ. ಉಳಿದ ಭಾಗಗಳಲ್ಲಿ ಕಂಪೌಂಡ್ ನಿರ್ಮಾಣಕ್ಕಾಗಿ ಅನುದಾನ ಬಯಸಿ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಬದ್ಧವಾಗಿ ಅನುದಾನ ಮಂಜೂರಾಗಿತ್ತು.
ಕಂಪೌಂಡ್ ಇಲ್ಲ ಎನ್ನುವುದಕ್ಕೆ ಹಾಗೂ ಕಂಪೌಂಡ್ ನಿರ್ಮಾಣದ ಅಗತ್ಯ ಇದೆ ಎನ್ನುವುದಕ್ಕೆ ಸೂಕ್ತವಾದ ಪುರಾವೆಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

ವಖ್ಫ್ ಬೋರ್ಡ್ ನ ಚೇಯರ್ ಮೇನ್ ಸ್ಥಾನ ಕ್ಕೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಶಾಫಿ ‌ಸ‌ಅದಿಯವರ ವರ್ಚಸ್ಸಿಗೆ ಧಕ್ಕೆ ತಂದು ಬೇಳೆ ಬೇಯಿಸುವ ಕೆಲವರ ಹುನ್ನಾರವಿದೆಂದು ಜನರು ಅರ್ಥ ಮಾಡಿಕೊಂಡಿದ್ದಾರೆ‌. ಆದುದರಿಂದ ಸ‌ಅದಿಯಾ ಸಂಸ್ಥೆಯ ಮೇಲೆ ಸುಳ್ಳಾರೋಪ ಮಾಡಿದವರನ್ನು ಸಮಾಜವು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ರೀತಿಯ ಸುಳ್ಳಾರೋಪಗಳ ಅಂತಿಮ ಪರಿಣಾಮ ಏನೆಂದರೆ ಮುಂದೆ ಯಾವುದೇ ಸಂಸ್ಥೆಗಳನ್ನು ಅವುಗಳಿಗೆ ಸಂಬಂಧಪಟ್ಟವರು ವಖ್ಫ್ ಗೆ ನೊಂದಾಯಿಸಲು ಹಿಂದೇಟು ಹಾಕಬಹುದು.

ಸಂಸ್ಥೆಯ ಹಾಗೂ ಸಂಸ್ಥೆಯ ಪ್ರಧಾನ‌ ಕಾರ್ಯದರ್ಶಿಯವರ ಮೇಲೆ ಸುಳ್ಳಾರೋಪ ಹೊರಿಸಿ ಮಾನಹಾನಿ ಮಾಡಿರುವವರ ವಿರುದ್ಧ ಕಾನೂನು ಸಮರ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸ‌ಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ‌.

error: Content is protected !! Not allowed copy content from janadhvani.com