janadhvani

Kannada Online News Paper

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತ: ಇಂದು ಕರವೇ ಯಿಂದ ಟ್ವಿಟರ್ ಆಂದೋಲನ

ಬೆಂಗಳೂರು,ಡಿ.18: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸದೆ ರಾಜ್ಯ ಸರ್ಕಾರ ನಿಧಾನ ವಿಷವುಣಿಸಿ ಕೊಲ್ಲುತ್ತಿದೆ. ನಾವು ಒಟ್ಟಾಗಿ ನಿಂತು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಿದೆ.ಇಂದು ಸಂಜೆ 5 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಆಂದೋಲನ ಹಮ್ಮಿಕೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ.ನಾರಾಯಣಗೌಡ ತಿಳಿಸಿದ್ದಾರೆ.

#ಕನ್ನಡವಿವಿಉಳಿಸಿ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ರಾಜ್ಯ ಸರ್ಕಾರದ ತಾತ್ಸಾರ ಧೋರಣೆಯನ್ನು ಖಂಡಿಸಿ ಎಲ್ಲ ಕನ್ನಡ ಮನಸುಗಳು ಸಂಜೆ 5 ಗಂಟೆಯಿಂದ ಟ್ವೀಟ್ ಮಾಡಬೇಕೆಂದು ಕರವೇ ಕೋರುತ್ತದೆ.

ಕನ್ನಡ ನುಡಿ, ಸಾಹಿತ್ಯ, ಪರಂಪರೆಗಾಗಿ ಮೀಸಲಾದ ಏಕೈಕ ವಿಶ್ವವಿದ್ಯಾಲಯ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿರುವ ಹಂಪಿ ವಿಶ್ವವಿದ್ಯಾಲಯ. ವರ್ಷಕ್ಕೆ ಆರು ಕೋಟಿ ಅನುದಾನ ಬೇಡುವ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಈ ವರ್ಷ‌‌ನೀಡಿರುವ ಅನುದಾನ ಕೇವಲ 50 ಲಕ್ಷ‌ ರುಪಾಯಿಗಳು. ಸಂಸ್ಥೆಯ‌ ಗುತ್ತಿಗೆ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದಷ್ಟು ವಿವಿ ಬಡವಾಗಿದೆ. ಹೀಗಿರುವಾಗ ಸಂಶೋಧನೆಯಂಥ ಕೆಲಸಗಳಿಗೆ ಹಣವೆಲ್ಲಿರಲು ಸಾಧ್ಯ?

ರಾಜ್ಯ ಸರ್ಕಾರದ ಬಳಿ ವೋಟ್ ಬ್ಯಾಂಕ್ ರಾಜಕಾರಣ‌ ನಡೆಸುವ ಉದ್ದೇಶದಿಂದ ಹೊಸಹೊಸ ಪ್ರಾಧಿಕಾರ ಸ್ಥಾಪಿಸಲು ಹಣವಿದೆ. ಆದರೆ ಏಕೈಕ ಕನ್ನಡ ವಿವಿಗೆ ಕೊಡಲು ಹಣವಿಲ್ಲವೆಂದರೆ ಹೇಗೆ? ಇದನ್ನು ನಾವು ಒಕ್ಕೊರಲಿನಿಂದ ಖಂಡಿಸಬೇಕಿದೆ. ಇಂದು (18-12-2020) ರಂದು ಸಂಜೆ ಕರ್ನಾಟಕ ರಕ್ಷಣಾ ವೇದಿಕೆ‌ ಟ್ವಿಟರ್ ಆಂದೋಲನ‌ ನಡೆಸುವುದರ ಜತೆಗೆ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಿದೆ ಎಂದು ಅವರು ತಿಳಿಸಿದರು.

error: Content is protected !! Not allowed copy content from janadhvani.com