ಶ್ರೀನಗರ: ನಿರೀಕ್ಷೆಯಂತೆಯೇ ಗುಪ್ಕರ್ ಘೋಷಣೆ ಅನುಷ್ಠಾನಕ್ಕಾಗಿ ಮೈತ್ರಿಯ ಘೋಷಣೆ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು, ವಿಶೇಷ ಸ್ಥಾನಮಾನ ಮರಳಿ ಪಡೆಯಲು ಸಾಂವಿಧಾನಿಕ ಹೋರಾಟ ಮಾಡುವುದಾಗಿ ಘೋಷಣೆ ಮಾಡಿವೆ. ಬದ್ಧ ಶತ್ರುಗಳು ಎಂದೇ ಕರೆಯಲ್ಪಡುತ್ತಿದ್ದ ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಆಬ್ದುಲ್ಲಾ ಪರಸ್ಪರ ಕೈ ಜೋಡಿಸಿದ್ದು ಮೈತ್ರಿಕೂಟ ಘೋಷಣೆ ಮಾಡಿದ್ದಾರೆ.
ಕಣಿವೆಯ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮನೆಯಲ್ಲಿ ಇಂದು(ಗುರುವಾರ) ನಡೆದ ಸಭೆಯ ಬಳಿಕ, ‘ಪೀಪಲ್ಸ್ ಅಲೈನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್’ ಸ್ಥಾಪನೆಯ ಘೋಷಣೆ ಮಾಡಲಾಯಿತು.ಸಭೆಯ ಬಳಿಕ ಮಾತನಾಡಿದ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಆರ್ಟಿಕಲ್ 370 ಮರುಸ್ಥಾಪನೆಗೆ ಒತ್ತಾಯಿಸಿ ಗುಪ್ಕರ್ ಘೋಷಣೆಗೆ ಸಹಿ ಮಾಡಿದ ರಾಜಕೀಯ ಪಕ್ಷಗಳು ಐಕ್ಯ ಹೋರಾಟವನ್ನು ನಡೆಸಲಿವೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನದ ನೀತಿ ನಿಯಮಗಳ ಅಡಿಯಲ್ಲೇ ನಮ್ಮ ಹೋರಾಟ ಸಾಗಲಿದ್ದು, ಕಣಿವೆ ಮತ್ತೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಏಕೈಕ ಬೇಡಿಕೆಯೊಂದಿಗೆ ಜಂಟಿ ಹೋರಾಟವನ್ನು ಆರಂಭಿಸಲಾಗುವುದು ಎಂದು ಫಾರೂಕ್ ಅಬ್ದುಲ್ಲಾ ಈ ವೇಳೆ ನುಡಿದರು.
ಇದೇ ವೇಳೆ ಮಾತನಾಡಿದ ಮತ್ತೋರ್ವ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಆರ್ಟಿಕಲ್ 370 ರದ್ದತಿ ಕಣಿವಬೆಯ ಜನರಿಗೆ ಮಾಡಿದ ಮೋಸವಾಗಿದ್ದು, ಈ ಐತಿಹಾಸಿಕ ಪ್ರಮಾದವನ್ನು ಸರಿ ಮಾಡುವಂತೆ ಆಗ್ರಹಿಸಿ ಹೋರಾಟ ಮಾಡಲಾಗುವುದು ಎಂದು ನುಡಿದರು.
ಸಹಿ ಹಾಕಿದ ರಾಜಕೀಯ ಪಕ್ಷಗಳು:
- ನ್ಯಾಶನಲ್ ಕಾನ್ಫರೆನ್ಸ್(NC)
- ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ(PDP)
- ಇಂಡಿಯನ್ ನ್ಯಾಶನಲ್ ಕಾಂಗ್ರೆಸ್(INC)
- ಭಾರತೀಯ ಕಮ್ಯೂನಿಸ್ಟ್ ಪಾರ್ಟಿ(ಮಾರ್ಕ್ಸ್‌ವಾದಿ)(CPI-M)
- ಪೀಪಲ್ಸ್ ಕಾನ್ಫರೆನ್ಸ್(PC)
- ಆವಾಮಿ ನ್ಯಾಶನಲ್ಕಾನ್ಫರೆನ್ಸ್(ANC)