janadhvani

Kannada Online News Paper

ಶಾಲೆ ತೆರೆಯಲು ಪೋಷಕರ ಒಪ್ಪಿಗೆಬೇಕು, ಸದ್ಯಕ್ಕೆ ಆರಂಭಿಸುವುದಿಲ್ಲ- ಮುಖ್ಯಮಂತ್ರಿ

ಬೆಂಗಳೂರು: ಶಾಲೆಗಳನ್ನು ಪುನರ್ ಆರಂಭ ಮಾಡುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡಬೇಕು. ಶಾಲೆ ತೆರೆಯಲು ಪೋಷಕರ ಒಪ್ಪಿಗೆಬೇಕು. ಈ ಹಿನ್ನಲೆ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನಲೆ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶಾಲೆಗಳನ್ನು ಆರಂಭಿಸಬೇಕಾ, ಬೇಡವಾ ಎಂಬ ಕುರಿತು ಹತ್ತು ಜಿಲ್ಲೆಯ ಜಿಲ್ಲಾಧಿಕಾರಿ, ಎಸ್ಪಿ, ಆರೋಗ್ಯಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ಸಭೆ ಬಳಿಕ ಮಾತನಾಡಿದ ಅವರು, ಶಾಲೆ ಆರಂಭಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆ ಸಭೆಯಲ್ಲಿ ಈ ಕುರಿತು ಚರ್ಚಿಸಿಲ್ಲ. ಶಾಲೆ ಪ್ರಾರಂಭದ ಕುರಿತು ತಜ್ಞರ ವರದಿ ಕೋರಲಾಗಿದೆ. ಈ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಅವರು, ಕೋವಿಡ್ ಸ್ಥಿತಿಗತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದೇನೆ. ಕೊರೋನಾ ಅತಿ ಹೆಚ್ಚಿರುವ ಜಿಲ್ಲೆಯಲ್ಲಿ ಯಾವ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ. ಕೊರೊನಾ ಸ್ಥಿತಿ ಬಗ್ಗೆ ವರದಿ ನೀಡಲು ಸೂಚಿಸಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ನಡೆ ಕುರಿತು ತೀರ್ಮಾನ ಮಾಡುತ್ತೇವೆ.

ಕೊರೋನಾ ಸೋಂಕು ಹೆಚ್ಚಿರುವ 10 ಜಿಲ್ಲೆಗಳಲ್ಲಿ ತುಮಕೂರು, ಮೈಸೂರು, ಧಾರವಾಡ ಬಿಟ್ಟು ಉಳಿದೆಲ್ಲಾ ಜಿಲ್ಲೆಗಳಲ್ಲಿ ನಿಯಂತ್ರಣ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಸಾವಿನ ಪ್ರಮಾಣ ಶೇ 1ಕ್ಕೆ ಇಳಿಸಲು ಸೂಚಿಸಲಾಗಿದೆ. ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಪ್ರಧಾನಿಗಳು ಕೂಡ ಸಾವಿನ ಪ್ರಮಾಣ ಕಡಿಮೆಗೆ ಸೂಚನೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.

ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿರುವ ಅಂಶಗಳು

  • ಕೊವೀಡ್ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿ.
  • ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ.
  • ಅವರ ಪರೀಕ್ಷೆಗಳನ್ನು ಮಾಡಿ ಸೂಕ್ತ ಚಿಕಿತ್ಸೆ ನೀಡಿ.
  • ಈ ಮೂಲಕ ಸಾಂಕ್ರಾಮಿಕ ರೋಗ ತಡೆ ಹಾಗೂ ಸಾವಿನ ಪ್ರಮಾಣ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಿ.
  • ಮಾಸ್ಕ್ ಧರಿಕೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜ್ ಬಗ್ಗೆ ಅರಿವು ಮೂಡಿಸಿ.
  • ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಅರಿವಿನ ಒಂದು ಭಾಗ ಆಗಬೇಕು.
  • ಮಾಸ್ಕ ದಂಡದ ಕುರಿತು ಸರ್ಕಾರಕ್ಕೆ ಬೇರೆ ಉದ್ದೇಶ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು.
  • ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ.
  • ಕೋವಿಡ್ 19 ಸಂಬಂಧಿಸಿದ ಎಸ್.ಒ.ಪಿಗಳನ್ನು ಪಾಲಿಸಿ.
  • ಮರಣ ಪ್ರಮಾಣ ಹೆಚ್ಚದಂತೆ ಕಾಳಜಿ ನಿಗಾ ವಹಿಸಿ.

error: Content is protected !! Not allowed copy content from janadhvani.com