janadhvani

Kannada Online News Paper

ಅಮಾನತುಗೊಂಡಿರುವ ರಾಜ್ಯಸಭೆ ಸದಸ್ಯರಿಂದ ಆಹೋರಾತ್ರಿ ಧರಣಿ

ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಕೋಲಾಹಲ ಮಾಡಿ ಅಮಾನತು ಶಿಕ್ಷೆಗೊಳಪಟ್ಟಿರುವ 8 ರಾಜ್ಯಸಭೆ ಸದಸ್ಯರು ಸಂಸತ್ ಆವರಣದಲ್ಲಿ ಆಹೋರಾತ್ರಿ ಧರಣಿ ನಡೆಸಿದ್ದಾರೆ.

ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ ಮೇರೆಗೆ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರಮ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿತ್ತು. ಸ್ಪೀಕರ್ ವೆಂಕಯ್ಯನಾಯ್ಡು ಅವರ ನಿರ್ಧಾರವನ್ನು ಅಸಂವಿಧಾನಿಕ ಎಂದು ಟೀಕಿಸಿರುವ ನಾಯಕರು ಸಂಸತ್ ಆವರಣದಲ್ಲಿ ಧರಣಿ ನಡೆಸಿದ್ದಾರೆ. ಸದಸ್ಯರು ಹಾಸಿಗೆ, ದಿಂಬು, ಸೊಳ್ಳೆಬತ್ತಿಯೊಂದಿಗೆ ಸಂಸದರು ಧರಣಿ ಕೈಗೊಂಡಿದ್ದಾರೆ.

ಪ್ರತಿಭಟನಾ ನಿರತ ಸದಸ್ಯರ ಪೈಕಿ ಕಾಂಗ್ರೆಸ್ ರಿಪುನ್ ಬೋರಾ ಮತ್ತು ಸಿಪಿಐಎಂ ಎಲಮರಮ್ ಕರೀಮ್ ಇಬ್ಬರೂ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರು ಮಧುಮೇಹ ಕಾಯಿಲೆ ಹೊಂದಿದ್ದರು. ಹೀಗಾಗಿ ಅಹೋರಾತ್ರಿ ಪ್ರತಿಭಟನೆಯಿಂದಾಗಿ ಅವರ ಆರೋಗ್ಯಗ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಭೀತಿ ಇತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಆಂಬ್ಯುಲೆನ್ಸ್ ಒಂದನ್ನು ಸ್ಥಳದಲ್ಲೇ ನಿಯೋಜಿಸಲಾಗಿತ್ತು.

ಧರಣಿ ನಿರತ ಸದಸ್ಯರಿಗೆ ವಿಪಕ್ಷಗಳ ನಾಯಕರು ಬೆಂಬಲ ನೀಡಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸದಸ್ಯರಿಗೆ ಬೆಂಬಲ ನೀಡಿದರು. ಅಂತೆಯೇ ಪ್ರತಿಭಟನಾ ನಿರತ ತಮ್ಮ ಸಹೋದ್ಯೋಗಿಗಳ ಪರ ಒಗ್ಗಟ್ಟು ಪ್ರದರ್ಶಿಸಲು ಪ್ರತಿಪಕ್ಷದ ಹಿರಿಯ ನಾಯಕರಾದ ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಫಾರೂಖ್ ಅಬ್ದುಲ್ಲಾ, ಜೆಡಿಎಸ್‌ನ ಎಚ್‌.ಡಿ ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಸ್ಥಳದಲ್ಲಿ ಹಾಜರಿದ್ದು, ಪ್ರತಿಭಟನೆಯನ್ನು ಬೆಂಬಲಿಸಿದರು. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ಪ್ರತಿಭಟನೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಭಾಗವಹಿಸಿದ್ದರು. ಅಮಾನತುಗೊಂಡ ಸಂಸದರು ದೇಶಭಕ್ತಿ ಗೀತೆಗಳನ್ನು ಹಾಡಿ, ರೈತ ಪರ ಘೋಷಣೆ ಕೂಗಿ, ಫಲಕ ಪ್ರದರ್ಶನ ಮಾಡಿದರು. ಈ ಮೂಲಕ ಕೃಷಿ ಮಸೂದೆಯನ್ನು ವಿರೋಧಿಸಿದರು.

error: Content is protected !! Not allowed copy content from janadhvani.com