janadhvani

Kannada Online News Paper

ವರುಣನ ಅಬ್ಬರಕ್ಕೆ ಉಡುಪಿ ತತ್ತರ : 50 ಕುಟುಂಬಗಳ ರಕ್ಷಣೆ

ಉಡುಪಿ : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದಾಗಿ ಭಾನುವಾರ ಬೆಳಗ್ಗೆ ಉಡುಪಿಯ ಚಿತ್ರಣವೇ ಬದಲಾಗಿದೆ. ಹಲವೆಡೆ ನೆರೆ ನುಗ್ಗಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ನಗರದ ಕೆಲವೆಡೆ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶನಿವಾರ ಮಧ್ಯಾಹ್ನದ ಬಳಿಕ ಸುರುವಿಟ್ಟ ಮಳೆ ಎಡೆಬಿಡದೇ ಸುರಿಯುತ್ತಿದೆ. ಕೆರೆ, ಕಾಲುವೆ, ಸಮುದ್ರಗಳೆಲ್ಲ ತುಂಬಿ ಹರಿಯುತ್ತಿವೆ. ಪರಿಣಾಮವೆಂಬಂತೆ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಉಡುಪಿ ಅಂಬಲಪಾಡಿ, ಗುಂಡಿಬೈಲು, ಬೈಲಕೆರೆ, ಮಠದ ಬೆಟ್ಟು, ಶ್ರೀಕೃಷ್ಣ ಮಠದ ರಾಜಾಂಗಣ, ಪಾರ್ಕಿಂಗ್ ಏರಿಯಾ, ನಿಟ್ಟೂರು ಕೊಡಂಕೂರು ಚಿಟ್ಪಾಡಿ ಸೇರಿದಂತೆ ನಾನಾ ಪ್ರದೇಶಗಳಿಗೆ ನೆರೆ ನುಗ್ಗಿದೆ. ತಗ್ಗು ಪ್ರದೇಶಗಳಲ್ಲಿ ನೆರೆಯಲ್ಲಿ ಸಿಲುಕಿರುವ ಅನೇಕರನ್ನು ಅಗ್ನಿಶಾಮಕದಳ, ಪೊಲೀಸರು ರಕ್ಷಿಸಿದ್ದು, ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದು ತಂದಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮಳೆ ಮತ್ತಷ್ಟು ಬಿರುಸುಗೊಂಡಿದೆ. ಕೆಲ ದಶಕಗಳ ಬಳಿಕ ಈ ಪ್ರಮಾಣ ಮಳೆಯಾಗಿದೆ ಎನ್ನಲಾಗುತ್ತಿದೆ. ಭೀಕರ ಮಳೆಯಿಂದಾಗಿ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ, ರಾಜಾಂಗಣದ ತಳ ಮಹಡಿ, ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ನಗರದ ಅಂಗಡಿ, ಮುಂಗಟ್ಟು ಸೇರಿದಂತೆ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಭಾರಿಯ ಮಳೆಯ ಪರಿಣಾಮ ಸ್ವರ್ಣ, ಸೀತಾನದಿ ಮೈ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿವೆ. ಸುತ್ತಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಸಂಪೂರ್ಣ ಸ್ಥಗಿತವಾಗಿದೆ. ಪುತ್ತಿಗೆ ಭಾಗದಲ್ಲಿ ಕೃತಕ ನೆರೆಯಿಂದಾಗಿ ಮನೆಗಳು ಸಂಪೂರ್ಣ ಜಲಾವೃತವಾಗಿದೆ. ಮನೆಯೊಳಗೆ ನೀರು ನುಗ್ಗಿ ಗೋಡೆ ಕುಸಿದು ಬಿದ್ದಿದೆ‌. ಭಾರೀ ಮಳೆಗೆ ನೆರೆಯಲ್ಲಿ ಸಿಲುಕಿದ 50 ಕುಟುಂಬಗಳನ್ನು ರಕ್ಷಣೆ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಗುಂಡಿಬೈಲು, ಮಠದ ಬೆಟ್ಟು, ಕಲ್ಸಂಕ, ಅಂಬಲಪಾಡಿ, ಬನ್ನಂಜೆ, ಗರಡಿ‌ ಪರಿಸರ, ಕಾಪು ಸೇರಿದಂತೆ ಶನಿವಾರ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಉಡುಪಿಗೆ ಎನ್‌ಡಿಆರ್‌ಎಫ್ ಪಡೆಯನ್ನು ಕರೆಸಿಕೊಳ್ಳಲಾಗುತ್ತಿದೆ. ಅಪಾಯಕ್ಕೆ ಸಿಲುಕಿದ ಸಾರ್ವಜನಿಕರು 1077 ಕಂಟ್ರೋಲ್ ರೂಂ ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.