ಕರ್ನಾಟಕ ಎಸ್ಸೆಸ್ಸೆಫ್ಫಿಗೆ ಧ್ವಜ ದಿನದ ಸಂಭ್ರಮ !
✍️ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷರು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
ಸುಮಾರು ಮೂವತ್ತೊಂದು ಸಂವತ್ಸರಗಳ ಹಿಂದೆ ಇದೇ ದಿನವಾಗಿತ್ತು ಎಸ್ಸೆಸ್ಸೆಫ್ ಕನ್ನಡ ನಾಡಿಗೆ ಕಾಲಿಟ್ಟಿದ್ದು. ಹಲವು ಉಲಮಾ ಉಮರಾಗಳ ಕಠಿಣ ಪರಿಶ್ರಮದ ಫಲವಾಗಿತ್ತದು. ಹಲವು ಏಳುಬೀಳುಗಳ ಬಳಿಕ ಇಂದು ಕನ್ನಡ ಮಣ್ಣಿನ ಸುನ್ನಿ ವಿದ್ಯಾರ್ಥಿಗಳ ಆಶಾಕಿರಣವಾಗಿ ಬೆಳೆದು ನಿಂತಿದೆ.
ಆಧುನಿಕತೆಯ ಅಮಲಿನಲ್ಲಿ ಬಾಳು ಬರಡಾಗಿಸುತ್ತಿದ್ದ ವಿದ್ಯಾರ್ಥಿಗಳ ಮಧ್ಯೆ ಎಸ್ಸೆಸ್ಸೆಫ್ ಒಂದು ಭರವಸೆಯ ಬೆಳಕಾಗಿ ಉದಿಸಿ ಬಂದಿತ್ತು. ಇಂದು ಹಲವು ಸೆಲೆಬ್ರಿಟಿಗಳು ಕೂಡ ಡ್ರಗ್ಸ್ ಜಾಲದ ಉರುಳಲ್ಲಿ ಸಿಲುಕಿ ಒದ್ದಾಡುತ್ತಿರುವಾಗಲೂ, ಹಲವು ಕಾಲೇಜು ಕ್ಯಾಂಪಸ್‌ಗಳು ಗಾಂಜಾ ಅಫೀಮುಗಳ ಅಡ್ಡೆಯಾಗಿ ಮಾರ್ಪಡುವಾಗಲೂ ಅದ್ಯಾವುದರ ಮುಂದೆಯೂ ಎಸ್ಸೆಸ್ಸೆಫ್ ಕಾರ್ಯಕರ್ತನ ಒಂದೇ ಒಂದು ಹೆಸರು ಕಾಣಸಿಗಲ್ಲ ಎಂಬುವುದೇ ಈ ಸಂಘಶಕ್ತಿಯ ಪರಿಶುದ್ಧತೆಗೆ ಸ್ಪಷ್ಟ ಸಾಕ್ಷಿ!
ವಿದ್ಯಾರ್ಥಿಗಳಿಗೆ ನೈತಿಕ ಜಾಗೃತಿಯನ್ನು, ಆಧ್ಯಾತ್ಮಿಕ ಅನುಭೂತಿಯನ್ನು, ಧಾರ್ಮಿಕ ಕಾಳಜಿಯನ್ನು ನೀಡಿ ಎಸ್ಸೆಸ್ಸೆಫ್ ಬೆಳೆಸುತ್ತಿದೆ. ಸಾತ್ವಿಕ ವಿದ್ವಾಂಸರ ಸಾರಥ್ಯ, ಸಾದಾತ್‌ಗಳ ಆಶಿರ್ವಾದದೊಂದಿಗೆ ಎಸ್ಸೆಸ್ಸೆಫ್ ಇಂದು ರಾಜ್ಯಾದ್ಯಂತ ಹರಡಿ ನಿಂತಿದೆ. ಆರಂಭದ ದಶಕಗಳಲ್ಲಿ ಕೇವಲ ಕರಾವಳಿ ಮತ್ತು ಆಸುಪಾಸಿಗೆ ಮಾತ್ರ ಸೀಮಿತವಾಗಿದ್ದ ಎಸ್ಸೆಸ್ಸೆಫ್ ಇದೀಗ ಮಧ್ಯ ಹಾಗೂ ಉತ್ತರ ಕರ್ನಾಟಕದಾದ್ಯಂತ ವ್ಯಾಪಕವಾಗಿ ಪಸರಿಸಿದೆ.
ಉಲಮಾ ನೇತೃತ್ವದ ಕೊರತೆಯಿಂದಲೂ, ವ್ಯವಸ್ಥಿತ ಮದ್ರಸಾ ಶಿಕ್ಷಣದ ಅಲಭ್ಯತೆಗಳಿಂದಲೂ ಧಾರ್ಮಿಕವಾಗಿ ತೀರಾ ಹಿಂದುಳಿದಿದ್ದ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಎಸ್ಸೆಸ್ಸೆಫ್ ಶೈಕ್ಷಣಿಕ ಜಾಗೃತಿಯ ಚಳುವಳಿಯನ್ನು ಆರಂಭಿಸಿ ಹಲವು ಕಡೆಗಳಲ್ಲಿ ಪರಿವರ್ತನೆಯ ತಂಗಾಳಿ ಬೀಸುವಂತೆ ಮಾಡಿದೆ. ಹಲವು ವಿದ್ಯಾರ್ಥಿ ಯುವ ಜನತೆಯನ್ನು ಸತ್ಯಪಥದತ್ತ ಕೈಹಿಡಿದೆತ್ತಿದೆ. ಅಲ್ ಹಂದುಲಿಲ್ಲಾಹ್…
ಆಧ್ಯಾತ್ಮಿಕ ಮಜ್ಲಿಸ್‌ಗಳು, ಅಧ್ಯಯನ ಶಿಬಿರಗಳು, ಐತಿಹಾಸಿಕ ಸಮ್ಮೇಳನಗಳು, ಚಾರಿತ್ರಿಕ ಯಾತ್ರೆಗಳು, ಹಲವು ಬಗೆಯ ಸೆಮಿನಾರ್‌ಗಳು, ತುರ್ತು ಸಂದರ್ಭಗಳಲ್ಲಿನ ಸೇವೆಗಳು, ಹಲವು ಬಗೆಯ ರಿಲೀಫ್‌ಗಳು, ಸಾಮಾಜಿಕ ಅನಿಷ್ಟಗಳ ವಿರುದ್ಧದ ಕಾನೂನುಬದ್ಧ ಹೋರಾಟಗಳು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಯಾವುದೇ ತೊಂದರೆ ಕೊಡದೆ ನಡೆಸಿದ ಹಲವು ಪ್ರತಿಭಟನೆಗಳು, ಸಹಸ್ರಾರು ವಿದ್ಯಾರ್ಥಿ ಪ್ರತಿಭೆಗಳ ಸುಪ್ತಶಕ್ತಿಯನ್ನು ಹೊರಹೊಮ್ಮಿಸಿದ ‘ಪ್ರತಿಭೋತ್ಸವ’ದಂತಹ ಕಲಾಮೇಳಗಳು; ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ ಈ ಕಳೆದ ಮೂರು ದಶಕಗಳ ಎಸ್ಸೆಸ್ಸೆಫ್ಫಿನ ಸಾಂಘಿಕ ಹೆಗ್ಗುರುತುಗಳು!!
ಈ ಶತಮಾನದ ಅತ್ಯಂತ ದೊಡ್ಡ ಸವಾಲು, ವಿದ್ಯಾರ್ಥಿ ಯುವ ಜನತೆಯ ದುರಂತ ಕಥೆಗಳಾಗಿವೆ. ಅವರು ಗಾಂಜಾ ವ್ಯಸನಿಗಳಾಗಿ, ಪ್ರಣಯ ಪಕ್ಷಿಗಳಾಗಿ, ಪುಂಡು ಪೋಕರಿಗಳಾಗಿ ಅಸ್ಪಷ್ಟ ಹಾದಿಯಲ್ಲಿ ಆಲಸ್ಯದೊಂದಿಗೆ ಅಂಡಲೆಯುತ್ತಿದ್ದಾರೆ. ಸ್ಪಷ್ಟ ಗುರಿಯಿಲ್ಲದೆ, ಲಂಗುಲಗಾಮಿಲ್ಲದೆ ಬೇಕಾಬಿಟ್ಟಿಯಾಗಿ ಜೀವಿಸಿ ಬೇಸತ್ತು ಕೊರಗಿ ಸೊರಗಿ ಕೊನೆಗೆ ತುಂಡು ಹಗ್ಗಗಳಿಗೋ, ವಿಷಪಾಷಾಣಗಳಿಗೋ, ರೈಲು ಹಳಿಗಳಿಗೋ ಕೊರಳೊಡ್ಡಿ ಹದಿಹರೆಯದಲ್ಲೇ ಜೀವನ ಯಾತ್ರೆ ಮುಗಿಸುತ್ತಿದ್ದಾರೆ.
ಐಶಾರಾಮಿ ಜೀವನದ ಗುಂಗಿನಲ್ಲಿ ಇಹಪರ ಎರಡನ್ನೂ ಕಳಕೊಳ್ಳುವ ದುರಂತ ಕಥೆಗಳು ಇಂದು ಕಾಲೇಜು ಕ್ಯಾಂಪಸ್‌ಗಳಲ್ಲಿ ಬೇಕಾಬಿಟ್ಟಿಯಾಗಿದೆ. ಆದರೆ ತಲೆಯಲ್ಲೊಂದು ಟೋಪಿ, ಶುಭ್ರ ವಸ್ತ್ರಧರಿಸಿ, ಮುಖತುಂಬಾ ಮುಗುಳ್ನಗೆಯೊಂದಿಗೆ ಹಿರಿಯರನ್ನು ಗೌರವಿಸುತ್ತಾ, ಕಿರಿಯರಿಗೆ ಕರುಣೆ ತೋರುತ್ತಾ, ಸಮಪ್ರಾಯದವರೊಂದಿಗೆ ಸಹಾನುಭೂತಿಯಿಂದ ವರ್ತಿಸುತ್ತಾ, ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ನಿಲ್ಲುವ, ಧರ್ಮ ಜಾತಿ ಪಕ್ಷ ಪಂಥಗಳ ವ್ಯತ್ಯಾಸವಿಲ್ಲದೆ ಎಲ್ಲರೊಂದಿಗೂ ಪ್ರೀತಿಯೊಂದಿಗೆ ಬೆರೆಯುವ ಉಲಮಾಗಳ ಮಾರ್ಗದರ್ಶನದಲ್ಲೂ, ಸಾದಾತ್‌ಗಳ ಆಶೀರ್ವಾದದೊಂದಿಗೆ ಬೆಳೆದ ಎಸ್ಸೆಸ್ಸೆಫ್ಫಿನ ಯುವಕ ಎಂದಿಗೂ ಈ ನಾಡಿಗೆ ಹಾಗೂ ಸಮಾಜಕ್ಕೆ ಅಭಿಮಾನ!
ಮರಣಾನಂತರವೂ ನಮ್ಮನ್ನು ಮರೆಯದ ಹಲವಾರು ಮಿತ್ರರನ್ನು ನೀಡುವ ಅನುಗ್ರಹೀತ ಸಂಘಟನೆಯಲ್ಲಿ ಸಕ್ರಿಯವಾಗಿ ಮುನ್ನಡೆಯೋಣ..
ಎಸ್ಸೆಸ್ಸೆಫ್ ಧ್ವಜದಿನದ ಶುಭಾಶಯಗಳು