ಮಂಗಳೂರು,ಆ. 22: ಇಲ್ಲಿನ ಪ್ರತಿಷ್ಠಿತ ಮಸ್ಜಿದ್ ಗಳಲ್ಲೊಂದಾದ ನಗರಕ್ಕೆ ಪ್ರವೇಶ ದ್ವಾರದಂತಿರುವ ರಾ.ಹೆ.66ರ ಬಳಿಯಿರುವ ಪಂಪ್‌ವೆಲ್‌ನ ತಖ್ವಾ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಮಸೀದಿಯ ಎಡಭಾಗದಲ್ಲಿ ನಿಂತ ದುಷ್ಕರ್ಮಿಗಳು ಮುಂಜಾನೆ ಸುಮಾರು 3.40ರ ವೇಳೆಗೆ ಸೋಡಾ ಬಾಟಲಿ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಸೀದಿಯ ಕಾವಲುಗಾರರ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ. ಕಾವಲುಗಾರರು ಬೆಳಗ್ಗೆ ಮಸೀದಿಯ ಮಹಡಿ ಹತ್ತಿದಾಗಲೇ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಮಸೀದಿಯ ಪದಾಧಿಕಾರಿಗಳ ಗಮನ ಸೆಳೆದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸರು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಗರದ ಪಾಂಡೇಶ್ವರದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಝಾದ್ ಅಲ್ಪಸಂಖ್ಯಾತರ ಭವನಕ್ಕೆ ಕಲ್ಲೆಸೆದು ಹಾನಿಗೊಳಿಸಲಾಗಿತ್ತು. ಇದೀಗ ಮತ್ತೊಂದು ಅಹಿತಕರ ಘಟನೆ ನಡೆದಿದ್ದು, ದುಷ್ಕರ್ಮಿಗಳು ಅಲ್ಪಸಂಖ್ಯಾತರನ್ನು ಕೆರಳಿಸಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ.
ಇಂತಹಾ ಸಮಾಜ ಘಾತುಕ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಸರ್ಕಾರ, ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.