ಬೆಂಗಳೂರು: ಪ್ರವಾದಿ ನಿಂದನೆಯ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ತಾನೇ ಹಾಕಿರುವುದಾಗಿ ಡಿ.ಜೆ.ಹಳ್ಳಿ ಗಲಭೆಗೆ ಕಾರಣನಾದ ಆರೋಪಿ ನವೀನ್ ತಪ್ಪೊಪ್ಪಿಕೊಂಡಿದ್ದಾನೆ.
ಶಾಸಕ ಅಖಂಡ ಶ್ರೀನಿವಾಸ್ ಅಕ್ಕನ ಮಗನಾಗಿರುವ ಆರೋಪಿ ನವೀನ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿತ್ತು. ಇದು ಗಲಭೆಗೂ ಕಾರಣವಾಗಿತ್ತು.
ಈ ಮೊದಲು ಮೊಬೈಲ್ ಫೋನ್ ಕಳೆದುಹೋಗಿದೆ ಹಾಗೂ ಫೇಸ್ಬುಕ್ ಹ್ಯಾಕ್ ಆಗಿದೆ ಎಂದು ನವೀನ್ ಹೇಳಿಕೆ ನೀಡಿದ್ದ. ಇದೀಗ ತಪ್ಪೊಪ್ಪಿಕೊಂಡಿರುವ ನವೀನ್, ಫೇಸ್ಬುಕ್ನಲ್ಲಿ ಸ್ಟೆಟಸ್ ಹಾಕಿಕೊಂಡಿದ್ದು ನಾನೇ ಎಂದು ಹೇಳಿದ್ದಾನೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣದ ಆರೋಪಿ ನವೀನ್ ಅನ್ನು ಪೂರ್ವ ವಿಭಾಗದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ತಾನು ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಕಮೆಂಟ್ ಜತೆಗೆ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
7 ಗಂಟೆ ಸುಮಾರಿಗೆ ಪೋಸ್ಟ್ ಮಾಡಿ 8 ಗಂಟೆಗೆ ಅದನ್ನು ಡಿಲೀಟ್ ಮಾಡಿದ್ದೆ. ಆದರೆ, ಆ ಒಂದು ಪೋಸ್ಟ್ ನಿಂದಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದು ತಾನು ಊಹಿಸಿರಲಿಲ್ಲ ಎಂದು ನವೀನ್ ಪೊಲೀಸರಿಗೆ ತಿಳಿಸಿದ್ದಾನೆ.
ಈ ಪೋಸ್ಟ್‌ನಿಂದಾಗಿ ಕೆ.ಜಿ.ಹಳ್ಳಿ, ಡಿಜೆಹಳ್ಳಿ, ಕಾವಲ್‌ಬೈರಸಂದ್ರದಲ್ಲಿ ಗಲಭೆ ಉಂಟಾಗಿ ದುಷ್ಕರ್ಮಿಗಳು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೂವರು ಯುವಕರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದರು.