janadhvani

Kannada Online News Paper

ಕೋಮು ಪ್ರಚೋದಕ ಪೋಸ್ಟ್: ಆರೋಪಿ ಸಹಿತ ನೂರಕ್ಕೂಅಧಿಕ ಮಂದಿ ಬಂಧನ

ಬೆಂಗಳೂರು: ಕೋಮು ಪ್ರಚೋದಕ ಪೋಸ್ಟ್ ಸಂಬಂಧ ಬೆಂಗಳೂರಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ 110 ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಕೋಮು ಪ್ರಚೋದಕ ಪೋಸ್ಟ್ ಹಾಕಿದ್ದ ಆರೋಪಿ ನವೀನ್ ನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ

ಈ ಸಂಬಂಧ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿ.ಜೆ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ನನ್ನು ದಸ್ತಗಿರಿ ಮಾಡಲಾಗಿದೆ. ಜೊತೆಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಇತರೆ 110 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದು, ನಗರದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿ ಎಂದು ಮನವಿ ಮಾಡಿದ್ದಾರೆ.