(ಜನಧ್ವನಿ ವಿಶೇಷ) ಜಗತ್ತಿನಾದ್ಯಂತ ಕೊರೋನಾ ವೈರಸ್ ದಾಳಿ ಮಾಡಿ ತಲ್ಲಣಗೊಳಿಸಿದ್ದು ಮಾತ್ರವಲ್ಲದೇ, ಶ್ರೀಮಂತರ ರೋಗವೆಂಬ ಹಣೆಪಟ್ಟಿಯೂ ಕಟ್ಟಿಕೊಂಡಿದೆ.
ಆದರೆ, ಈ ರೋಗ ಬಾಧಿಸಿದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಶೀಘ್ರ ಗುಣಮುಖರಾಗುವುದು ಕಂಡು ಬರುತ್ತಿಲ್ಲ. ಮಾತ್ರವಲ್ಲದೇ, ಸಾವಿಗೆ ಶರಣಾಗುತ್ತಿರುವುದು ಕಂಡು ಬರುತ್ತಿದೆ.
ವಿಐಪಿಗಳಿಗೆ ವಿಐಪಿ ಭದ್ರತೆಯ ಜತೆ ವಿಐಪಿ ಶುಶ್ರೂಷೆಯೂ ದೊರಕ್ಕುತ್ತಿದೆ. ಹಾಗಾಗಿ, ಬೇಗನೇ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬರುತ್ತಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಪ್ರಕೃತಿ ಚಿಕಿತ್ಸೆಯಿಂದ ಗುಣಮುಖನಾದೆ ಅಂದುಕೊಳ್ಳುತ್ತಿದ್ದಾರೆ. ಅದ್ಯಾವ ಪ್ರಕೃತಿ ಚಿಕಿತ್ಸೆ ಸ್ವಲ್ಪ ಜನಸಾಮನ್ಯರಿಗೂ ಲಭಿಸುವಂತೆ ಮಾಡಿ ಅಂದರೆ, ಅದಕ್ಕೆ ಈ ಜನಪ್ರತಿನಿಧಿಗಳು ತಯಾರಾಗುತ್ತಿಲ್ಲ.
ಜನಸಾಮಾನ್ಯನ ಕ್ವಾರಂಟೈನ್ ಮತ್ತು ಐಸೋಲೇಶನ್‌ಗಿಂತ ಈ ವಿಐಪಿಗಳ ಐಸೋಲೇಶನ್ ಭಿನ್ನವಾಗಿರುತ್ತದೆ. ಜನಸಾಮಾನ್ಯರ ಸೇವೆಗೆ ಯಾರನ್ನೂ ಬಳಿಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಆದರೆ, ಈ ವಿಐಪಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಇಲ್ಲದಿದ್ದರೆ, ಇವರು ಐಸೋಲೇಶನ್ ನಲ್ಲೇ ಜೀವ ಕಳಕೊಳ್ಳಬಹುದೇನೋ?
ವಿಐಪಿಗಳೀಗ ತನಗೂ ಸೋಂಕಿದೆ ಎಂದು ಟ್ವೀಟ್ ಮಾಡುವ ಸರದಿ. ರಾಜಕಾರಣಿಗಳು, ಸೆಲೆಬ್ರಿಟಿಗಳಲ್ಲಿ ಆನೇಕರಿಗೆ ಕೊರೋನಾ ಸೋಂಕು ಬಂದು ಹಲವರು ಸೋಂಕಿನಿಂದ ಮುಕ್ತರಾಗುತ್ತಿದ್ದಾರೆ. ಯಾರೂ ಇದುವರೆಗೆ ಜೀವ ಕಳಕೊಳ್ಳದೇ, ಜನಸಾಮಾನ್ಯ ಮಾತ್ರ ಕಳಕೊಂಡದ್ದು “ಆತ್ಮನಿರ್ಭರ” ಭಾರತದ ವಿಶೇಷ.
ವಿಐಪಿಗಳಿಗೆ ಸಿಗುವ ಶುಶ್ರೂಷೆ ಜನಸಾಮಾನ್ಯನಿಗೂ ಸಿಕ್ಕಿದಾಗ ಮಾತ್ರ ಭಾರತ ರಾಮರಾಜ್ಯ ಆಗಬಹುದು. ಅದಕ್ಕೆ, ರಾಜಕಾರಣಿಗಳು ತಯಾರಾಗಲಿ… ಇಲ್ಲ ಅದು ಅವರಿಂದ ಸಾಧ್ಯವಾಗದ ಮಾತು ಅಷ್ಟೇ!