ನವದೆಹಲಿ : ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಉತ್ತರ ಪ್ರದೇಶದ ಪತ್ರಕರ್ತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ, ಸಿಸಿಟಿವಿ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗಿದೆ. ವಿಕ್ರಂ ಜೋಶಿ ಮೃತ ಪತ್ರಕರ್ತ. ಇವರು ಸೋಮವಾರ ರಾತ್ರಿ ಘಜಿಯಾಬಾದ್ನಲ್ಲಿ ಸಹೋದರಿ ಮನೆಯಿಂದ ತನ್ನ ಇಬ್ಬರು ಮಕ್ಕಳ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು. ಐವರ ಗುಂಪು ಪತ್ರಕರ್ತನ ಮೇಲೆ ಹಲ್ಲೆ ನಡೆಸಿತ್ತು. ವಿಕ್ರಂ ಜೋಶಿಯನ್ನು ಕಾರಿನತ್ತ ಎಳೆದುಕೊಂಡು ಹೋದ ದುಷ್ಕರ್ಮಿಗಳು ಅವರ ಮಕ್ಕಳೆದುರೇ ಗುಂಡು ಹಾರಿಸಿದ್ದರು.
ಹೆಣ್ಣುಮಕ್ಕಳಿಬ್ಬರೂ ಸಹಾಯಕ್ಕಾಗಿ ಕಿರುಚಾಡಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಹಾಕಿ, ತಮ್ಮ ಅಪ್ಪನನ್ನು ಕಾಪಾಡುವಂತೆ ಅವರು ಗೋಗರೆಯುತ್ತಿದ್ದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಅಪರಿಚಿತರೊಬ್ಬರು ವಿಕ್ರಂ ಜೋಶಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ 9 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಕೆಲವರು ತೊಂದರೆ ನೀಡುತ್ತಿದ್ದಾರೆ ಎಂದು ಪತ್ರಕರ್ತ ವಿಕ್ರಂ ಜೋಶಿ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದೇ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ವಿಚಾರಣೆಯ ಬಳಿಕ ಸತ್ಯಾಂಶ ಹೊರಬೀಳಲಿದೆ.
ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರು ಕೂಡ ಪತ್ರಕರ್ತ ವಿಕ್ರಂ ಜೋಶಿ ಕುಟುಂಬಕ್ಕೆ ಪರಿಚಯವಿದ್ದವರೇ ಆಗಿದ್ದಾರೆ ಎನ್ನಲಾಗಿದೆ. ಇನ್ನು, ಕೊಲೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.