ಬೆಂಗಳೂರು: ಡ್ರೋನ್ ತಯಾರಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಡ್ರೋನ್ ಪ್ರತಾಪ್ ಅಸಲಿ ಮುಖ ಇತ್ತೀಗಷ್ಟೇ ಬಯಲಾಗಿತ್ತು. ಈಗ ಈತನಿಗೆ ಸಂಕಷ್ಟವೊಂದು ಎದುರಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಡ್ರೋನ್ ಪ್ರತಾಪ್ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿಎಫ್‌ಐಆರ್ ದಾಖಲಾಗಿದೆ.ಪ್ರತಾಪ್ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ವೈದ್ಯೆ ಡಾ.ಪ್ರಜ್ಞಾ ಅವರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ”ಪ್ರತಾಪ್ ಕೈ ಮೇಲೆ ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಆದರೂ ಅವರು ನಿಯಮ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದು ಸಾರ್ವಜನಿಕವಾಗಿ ಓಡಾಡಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಬಂಧನಕ್ಕಾಗಿ ಮೂರು ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿಜನ್ ಸ್ಕ್ವಾಡ್ ಪ್ರತಾಪ್ಗಾಗಿ ಹುಡುಕಾಟ ನಡೆಸುತ್ತಿದೆ.
ಡ್ರೋನ್ ಪ್ರತಾಪ್ ಇದೇ 15 ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್ವೊಂದರಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ ಆಗಿದ್ದ. ನಿಯಮದ ಪ್ರಕಾರ ಆತ 14ದಿನಗಳ ಕಾಲ ಕ್ವಾರಂಟೈನ್ ಆಗಬೇಕಿತ್ತು. ಆದರೆ, ಕ್ವಾರಂಟೈನ್ ಆದ ಮರುದಿನವೇ ಖಾಸಗಿ ಚಾನೆಲ್ನ ಸಂದರ್ಶನದಲ್ಲಿ ಪ್ರತಾಪ್ ಪಾಲ್ಗೊಂಡಿದ್ದ.
ಪ್ರತಾಪ್ ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಸದ್ಯ ಪ್ರತಾಪ್ ಫೋನ್ ಸ್ವಿಚ್ ಆಫ್ ಬರುತ್ತಿದೆ. ಈತ ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಪ್ರತಾಪ್ ಇದ್ದಾನೆ ಎನ್ನುವ ಮಾಹಿತಿ ಇದೆ. ಹೀಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಡ್ರೋನ್ ತಯಾರಿಸಿದ್ದೇನೆ, ಬೇರೆ ರಾಷ್ಟ್ರಗಳಲ್ಲಿ ತನ್ನನ್ನು ಕರೆದು ಗೌರವಿಸಿವೆ ಎಂದು ಪ್ರತಾಪ್ ಹೇಳಿಕೊಂಡಿದ್ದ. ಅಲ್ಲದೆ, ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡಿದ್ದ. ಆದರೆ, ಇದೆಲ್ಲವೂ ಸುಳ್ಳು ಎಂಬುದು ಇತ್ತೀಚೆಗೆ ಗೊತ್ತಾಗಿತ್ತು.






