janadhvani

Kannada Online News Paper

ಕಿಡ್ನಿ ವೈಫಲ್ಯದಿಂದ ಮಹಿಳೆ ಮೃತ್ಯು; ಮಾಧ್ಯಮಗಳಲ್ಲಿ ಕೋವಿಡ್ ಪಟ್ಟ- ಸಂದೇಹ

ಪುತ್ತೂರು (ಜನಧ್ವನಿ ವರದಿ): 32 ವರ್ಷ ವಯಸ್ಸಿನ ಪುತ್ತೂರು ಪರ್ಲಡ್ಕ ನಿವಾಸಿ ಮಹಿಳೆಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಅಸುನೀಗಿದ್ದು ಈಕೆ ಸಕ್ಕರೆ ಕಾಯಿಲೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಇದೀಗ ಕೋವಿಡ್ ಪರೀಕ್ಷಾ ವರದಿಯು ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು ಈ ವರದಿಯ ಬಗ್ಗೆ ಅಸಮಧಾನ ಮತ್ತು ಸಂಶಯ ವ್ಯಕ್ತವಾಗುತ್ತಿದೆ.

15 ದಿನಗಳ ಹಿಂದೆ ಮಹಿಳೆಯು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಸಿಸೇರಿಯನ್ ಮೂಲಕ ಜನ್ಮ ನೀಡಿದ್ದು ವೈದ್ಯರ ಸಲಹೆಯಂತೆ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು ಅದರಂತೆ ಮಹಿಳೆ ಮತ್ತು ನವಜಾತ ಶಿಶುವನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ತಾಯಿ ಮತ್ತು ಮಗು ಇಬ್ಬರೂ ತವರೂರಾದ ಆಲಂಕಾರು ಗ್ರಾಮದ ನೆಕ್ಕರೆಯ ಮಹಿಳೆಯ ಸಹೋದರಿಯ ಮನೆಯಲ್ಲಿ ಸಂಬಂಧಿ ಮಹಿಳೆಯೊಬ್ಬರೊಂದಿಗೆ ವಾಸ್ತವ್ಯವಿದ್ದರು ಈ ಬಗ್ಗೆ ಸ್ಥಳೀಯ ಪಂಚಾಯತ್ ಗೂ ಆಶಾ ಕಾರ್ಯಕರ್ತೆಯರಿಗೂ ಮಾಹಿತಿ ನೀಡಲಾಗಿತ್ತು.

ಸೋಮವಾರ ತಡರಾತ್ರಿ ಮಹಿಳೆಗೆ ಕಿಡ್ನಿ ಸಮಸ್ಯೆ ಉಲ್ಭಣಿಸಿದ್ದು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮಹಿಳೆ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ. ಇದೀಗ ಅವರ ಕೋವಿಡ್ ವರದಿಯು ಪಾಸಿಟಿವ್ ಬಂದಿರುವುದಾಗಿ ಕರಾವಳಿಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೃತ ಮಹಿಳೆಯ ಹತ್ತಿರದ ಸಂಬಂಧಿ ಯವರಲ್ಲಿ ಜನಧ್ವನಿ ಪ್ರತಿನಿಧಿ ಮತನಾಡಿಸಿದಾಗ ಕ್ವಾರಂಟೈನ್ ಅವಧಿಯಲ್ಲಿ ನಡೆಸಿದ 3 ಪರೀಕ್ಷಾ ವರದಿಗಳೂ ಕೋವಿಡ್ ನೆಗೆಟಿವ್ ಬಂದಿತ್ತು ಇದೀಗ ಏಕಾ ಏಕಿ ಪರೀಕ್ಷಾ ಫಲಿತಾಂಶ ಪಾಸಿಟಿವ್ ಹೇಗೆ ಬಂತು ಎಂಬುದರಲ್ಲೆ ಸಂಶಯವಿದೆ ಎನ್ನುತ್ತಾರೆ. ಮಹಿಳೆ ವಾಸ್ತವ್ಯವಿದ್ದ ಮನೆಯನ್ನು ಸಧ್ಯ ಸೀಲ್ ಡೌನ್ ಮಾಡಲಾಗಿದ್ದು ಅವರ ಗಂಡ ಕ್ವಾರಂಟೈನ್ ನಲ್ಲಿದ್ದಾರೆ.

ಸಾದಾ ಜ್ವರ ಬಂದರೂ ಇದೀಗ ಕೊರೋನಾ ಹೆಸರಲ್ಲಿ ಜನರನ್ನು ಆಸ್ಪತ್ರೆಗೆ ದಾಖಲಿಸಿ ಅವಶ್ಯಕವಾಗಿ ಆಸ್ಪತ್ರೆ ಅಗತ್ಯವಿರುವ ರೋಗಿಗಳಿಗೆ ಲಭ್ಯವಿಲ್ಲದಂತೆ ಆಗುತ್ತಿರುವುದು ಮತ್ತು ಕೊರೋನಾ ಕ್ವಾರಂಟೈನ್ ಸಮಯದಲ್ಲಿ ರೋಗಿಗಳಿಗೆ ಇತರ ಕಾಯಿಲೆಗಳಿಗೆ ಮದ್ದು ನೀಡದೆ ಇರುವುದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

error: Content is protected !! Not allowed copy content from janadhvani.com