janadhvani

Kannada Online News Paper

ಚೀನಿ ಆಪ್ ಬ್ಯಾನ್; ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ಕೇಂದ್ರ ಸರಕಾರ

ಭಾರತ ಸರ್ಕಾರ ಟಿಕ್ ಟಾಕ್, ಯುಸಿ‌ ಬ್ರೌಸರ್, ಹಲೋ ಸೇರಿದಂತೆ 59 ಚೀನಾ ಆಪ್ ಗಳನ್ನು ನಿಷೇಧಿಸಿದೆ. ಇವುಗಳೆಲ್ಲ ಪ್ರಧಾನಿ ಮೋದಿ ಕಾಲಘಟ್ಟದಲ್ಲೇ ಭಾರತದ ಒಳಗೆ ಪ್ರವೇಶಿಸಿದವುಗಳು. ಮೋದಿ 1.0 ಆಡಳಿತದಲ್ಲಿ ಚೀನಾ ಕಂಪೆನಿಗಳಿಗೆ ಸುಗ್ಗಿಯ ಕಾಲ. ಚೀನಾ ಸ್ಮಾರ್ಟ್ ಫೋನ್ ಗಳು ಭಾರತಕ್ಕೆ ಕಾಲಿಟ್ಟಿದ್ದಷ್ಟೇ ಅಲ್ಲ, ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಡಾಮಿನೇಟ್ ಮಾಡಿದ್ದು ಈ ಮೋದಿ 1.0 ಅವಧಿಯಲ್ಲಿ. ಈಗ ಬ್ಯಾನ್ ಆಗಿರುವ ಚೀನೀ ಆಪ್ ಗಳು ಚೀನಾ ಸ್ಮಾರ್ಟ್ ಫೋನ್ ಗಳ ಜತೆಯೇ ಇಂಡಿಯಾ ಪ್ರವೇಶಿಸಿದವುಗಳು. ಬಹುತೇಕ ಆಪ್ ಗಳು ಡೀಫಾಲ್ಟ್ ಆಗಿ ಮೊಬೈಲ್ ಕೊಂಡಾಗಲೇ ಜತೆಗೆ ಬಂದವುಗಳು.‌ ಮೋದಿ ಕಾಲದಲ್ಲಿ ಬಂದ ಆಪ್ ಗಳು ಈಗ ಮೋದಿ ಕಾಲದಲ್ಲೇ ಬ್ಯಾನ್ ಆಗಿವೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ಹಾಗೆ!

ಚೀನಾದ ಅಲಿಬಾಬಾ, ಟೆನ್ಸೆಂಟ್, ಬೈಟ್ ಡ್ಯಾನ್ಸ್ ಇತ್ಯಾದಿ ಕಂಪೆನಿಗಳು ಭಾರತದ ನೂರಾರು ಸ್ಟಾರ್ಟ್ ಅಪ್ ಗಳ ಮೇಲೆ ಬಂಡವಾಳ ಹೂಡಿದ್ದು ಕೂಡ‌ 2017-18ರ ಅವಧಿಯಲ್ಲಿ. ಈಗ ಸದ್ಯಕ್ಕೆ ನೇರವಾಗಿ ಚೀನೀಯರ ಕೈಯಲ್ಲಿರುವ ಆಪ್ ಗಳು ಮಾತ್ರ ಬ್ಯಾನ್ ಆಗಿವೆ. ಉಳಿದವುಗಳ ಕಥೆ ಮುಂದೆ ನೋಡಬೇಕಿದೆ.

ಚೀನೀ ಆಪ್ ಗಳನ್ನು ನಿಷೇಧಿಸುವ ಪ್ರಸ್ತಾಪ ದಿಢೀರನೆ ಹುಟ್ಟಿಕೊಂಡಿದ್ದೇನಲ್ಲ‌. 2017ರ ನವೆಂಬರ್ ನಲ್ಲೇ ರಕ್ಷಣಾ ಸಚಿವಾಲಯ ವೀಬೋ, ವೀಚಾಟ್, ಶೇರ್ ಇಟ್, ಟ್ರೂ ಕಾಲರ್, ಯೂಸಿ ಬ್ರೌಸರ್, ಮೀ‌ಸ್ಟೋರ್ ಸೇರಿದಂತೆ ಒಟ್ಟು 42 ಆಪ್ ಗಳನ್ನು ಪಟ್ಟಿ ಮಾಡಿ, ಇವೆಲ್ಲವೂ ದೇಶದ ಸುರಕ್ಷತೆಗೆ ಅಪಾಯಕಾರಿ ಎಂದು ಹೇಳಿತ್ತು.‌ ಆದರೆ ಅಂದಿನ ಮೋದಿ ಸರ್ಕಾರ ಈ ಆಪ್ ಗಳನ್ನು ನಿಷೇದಿಸುವ ಪ್ರಯತ್ನ ಮಾಡಲಿಲ್ಲ. 2019ರಲ್ಲೂ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಹಲವು ಭಾರತೀಯ ರಾಜಕಾರಣಿಗಳು ಟಿಕ್ ಟಾಕ್ ನಿಷೇಧಿಸಬೇಕೆಂದು ಸರ್ಕಾರವನ್ನು ಲೋಕಸಭೆಯಲ್ಲೇ ಆಗ್ರಹಿಸಿದ್ದರು.

ಹಾಗೆ ನೋಡಿದರೆ ದೇಶದ ಸುರಕ್ಷತೆಯ ದೃಷ್ಟಿಯಲ್ಲಿ‌ ಇಂಥ ಆಪ್ ಗಳನ್ನು ಯಾವ ದೇಶವಾದರೂ ಬ್ಯಾನ್ ಮಾಡಬಹುದು. ಅದಕ್ಕೆ ಯಾವ ಅಂತಾರಾಷ್ಟ್ರೀಯ ಕಾನೂನೂ‌ ಅಡ್ಡಿ ಬರುವುದಿಲ್ಲ. ಈ ರೀತಿ ಆಪ್ ಗಳನ್ನು ನಿಷೇಧಿಸುವುದು ಹೊಸದೇನೂ ಅಲ್ಲ. ಚೀನಾ ಟ್ವಿಟರ್ ಬ್ಯಾನ್ ಮಾಡಿದೆ, ಅದೇ ರೀತಿ ಅಮೆರಿಕದಲ್ಲಿ ಹಲವು ಚೀನೀ ಆಪ್ ಗಳಿಗೆ ಪ್ರವೇಶವಿಲ್ಲ‌.

ಸದ್ಯದ ಪರಿಸ್ಥಿತಿಯಲ್ಲಿ ಚೀನೀ‌ ಆಪ್ ಗಳನ್ನು ನಿಷೇಧಿಸಿರುವುದು ಚೀನಾವನ್ನು ರೊಚ್ಚಿಗೆಬ್ಬಿಸುವ ಸಾಧ್ಯತೆ ಇದೆ. ಚೀನಾ ತನ್ನ ವ್ಯಾವಹಾರಿಕ ಆಸಕ್ತಿಗಳಿಗೆ ಧಕ್ಕೆ ಬಂದರೆ ಸುಮ್ಮನೆ ಕೂರುವ ಗಿರಾಕಿ ಅಲ್ಲ. ಆಪ್ ಗಳ ಬ್ಯಾನ್ ವಿಷಯ ಅದಕ್ಕೆ ಸಣ್ಣ ಪೆಟ್ಟಂತೂ ಅಲ್ಲ. ಭಾರತವನ್ನು ಭವಿಷ್ಯದ ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳುವ ಅದರ ಮಹತ್ತ್ವಾಕಾಂಕ್ಷೆಗೆ ಹುಳಿ ಹಿಂಡಿದಂತಾಗಿರುವುದಂತೂ ನಿಜ. ಹಾಗೆಂದ ಮಾತ್ರಕ್ಕೆ ಚೀನಾಗೆ ಭಾರತ ಹೊರತಾಗಿ ಜಗತ್ತಿನ ಇತರ ದೇಶಗಳಲ್ಲಿ ಮಾರುಕಟ್ಟೆ ಇಲ್ಲ ಅಂತೇನೂ ಅಲ್ಲ. ಭಾರತದ ಜತೆ ಮೋದಿ 1.0 ಅವಧಿಯಲ್ಲಿ ಕುದುರಿಕೊಂಡ ವ್ಯವಹಾರ ಈಗ ಕುಸಿದಿದೆಯಷ್ಟೆ.

ಮುಂದೇನಾಗಲಿದೆ? ನಿಸ್ಸಂಶಯವಾಗಿ ಚೀನಾ ಪ್ರತಿರೋಧ ತೋರಿಯೇ ತೋರುತ್ತದೆ. ಯಾವ ಸ್ವರೂಪದಲ್ಲಿ ಎಂಬುದನ್ನು ಕಾದು ನೋಡಬೇಕು. ಭಾರತ-ಚೀನಾ ವ್ಯಾವಹಾರಿಕ ಸಂಬಂಧಗಳಲ್ಲಿ ಚೀನಾ ಆಪ್ ಗಳ ಪಾಲು ಐದು ಪರ್ಸೆಂಟೂ ಇಲ್ಲ. ಮಿಕ್ಕ 95% ಕಥೆ ಏನು? ಭಾರತದಲ್ಲಿರುವ ಚೀನಾ ಬಂಡವಾಳ, ಅಪ್ಪಟ ಭಾರತೀಯ ಸ್ಟಾರ್ಟ್ ಅಪ್, ಯೂನಿಕಾರ್ನ್ ಗಳ ಮೇಲೆ ಚೀನಾ ಹೂಡಿರುವ ಬಂಡವಾಳ, ಭಾರತೀಯ ಉದ್ಯಮಿಗಳ ಜತೆಗಿನ ಚೀನಾ ಪಾಲುದಾರಿಕೆಗಳು, ಭಾರತದ ಬಿಜಿನೆಸ್ ದೊರೆಗಳು ಚೀನಾ‌ ಬ್ಯಾಂಕುಗಳಿಂದ ಪಡೆದ ಸಾಲ? ರಫ್ತು ಮತ್ತು ಆಮದು?

ಒಂದು ಸಂಘರ್ಷವಂತೂ ಶುರುವಾಗಿದೆ. ಮುಂದೆ ಏನೇ ಆದರೂ ಎರಡೂ ದೇಶಗಳು ವ್ಯಾವಹಾರಿಕವಾಗಿ ಘಾಸಿಗೊಳ್ಳುವುದಂತೂ ಖಚಿತ. ಯಾರು ಎಷ್ಟು ನಷ್ಟ ಮಾಡಿಕೊಳ್ಳುತ್ತಾರೆ ಎಂಬುದು ಮಾತ್ರ ನಿಜವಾದ ಲೆಕ್ಕಾಚಾರವಾಗಲಿದೆ. ನನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಬೇಕು ಎಂದು‌ ಅವುಡುಗಚ್ಚಿ ನಿಂತ ಮೇಲೆ ನಷ್ಟದ ಬಗ್ಗೆ ಚಿಂತಿಸಲು ಸಾಧ್ಯವೇ?

ಲೇಖನ: ದಿನೇಶ್ ಕುಮಾರ್ ದಿನೂ

error: Content is protected !! Not allowed copy content from janadhvani.com