janadhvani

Kannada Online News Paper

ಹೆಚ್ಚುತ್ತಿರುವ ಆನ್ಲೈನ್ ಆಟ! ನಮ್ಮವರಿಗೆ ಹೇಳಿ ಕೊಡೋರ್ಯಾರು ಪಾಠ..?

#ಸ್ನೇಹಜೀವಿ ಅಡ್ಕ

ಕಾಲ ಬದಲಾದಂತೆ ಮನುಷ್ಯನೂ ಬದಲಾವಣೆಯನ್ನು ಬಯಸುತ್ತಿದ್ದಾನೆ.
ಆಧುನಿಕ ತಂತ್ರಜ್ಞಾನಗಳು ಬೆಳವಣಿಗೆಯಾಗುತ್ತಿರುವಂತೆಯೇ ಮನುಷ್ಯನ ವರ್ತನೆಗಳು ಕೂಡ ಎಲ್ಲೆ ಮೀರತೊಡಗಿದೆ.
ಮಾದಕ ವ್ಯಸನಿಗಳಾಗಿ ಯುವ ಸಮೂಹವು ಒಂದು ಕಡೆ ದಾರಿ ತಪ್ಪುತ್ತಿದ್ದರೆ, ಮಗದೊಂದು ಕಡೆ ಅದಕ್ಕಿಂತಲೂ ಹೀನವಾಗಿ ಯುವ ಸಮೂಹವು ಆನ್ಲೈನ್ ಆಟಗಳ ಮೂಲಕ ತಮಗರಿವಿಲ್ಲದಂತೆ ಕೆಡುಕಿನ ದಾರಿ ಹಿಡಿಯುತ್ತಿದ್ದಾರೆ.!

ಸಣ್ಣ ಮಕ್ಕಳ ಕೈಯಲ್ಲೂ ಯಥೇಚ್ಛವಾಗಿ ಕಾಣಸಿಗುವ ಮೊಬೈಲ್ ಗಳು ಮಕ್ಕಳನ್ನು ದಾರಿತಪ್ಪಿಸಲು ಇರುವಂತಹ ವಸ್ತು ಅನ್ನುವುದನ್ನು ಬಹಳಷ್ಟು ಹೆತ್ತವರು ಮರೆತಂತಿದೆ.
ಕೆಲವೊಂದು ಗೇಮ್ ಗಳನ್ನು ಡೌನ್ ಲೋಡ್ ಮಾಡಿಸಿ ಸಣ್ಣ ಮಕ್ಕಳ ಕೈಗೆ ನೀಡುವ ಹೆತ್ತವರು ಭವಿಷ್ಯದಲ್ಲಿ ಪ್ರಾಯಶ್ಚಿತ ಪಡುವುದರಲ್ಲಿ ಸಂಶಯವಿಲ್ಲ.

“ಮನೆಯಲ್ಲಿ ಮನುಷ್ಯನು ಮಗುವಿನಂತಿರಲೇಬೇಕು” ಎಂದು ಉಮರ್ ರ. ಅ ರವರು ಹೇಳಿದ್ದಾರೆ. ಉಮರ್ ರ.ಅ ರವರನ್ನು ನೋಡಿದರೆ ಒಂದು ಕ್ಷಣ ಮೈ ನಡುಕ ಹುಟ್ಟದವರು ಯಾರೂ ಇರಲಿಲ್ಲ. ಅಂತವರೂ ಸಹ ಮಕ್ಕಳ ಜೊತೆ ಮಕ್ಕಳಂತಿರುತ್ತಿದ್ದರು ಎಂಬುದು ಅವರ ಈ ಹೇಳಿಕೆಯಿಂದ ತಿಳಿದುಕೊಳ್ಳಬಹುದು.
ಮಕ್ಕಳಿಗೆ ನಿಷ್ಕಲ್ಮಶವಾದ ಪ್ರೀತಿಯನ್ನು ನೀಡುವುದರ ಬದಲು ಅವರಿಗೆ ಅಮಿತವಾದ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟು ಮಕ್ಕಳನ್ನು ಕೆಡುಕಿನ ವಕ್ತಾರರನ್ನಾಗಿಸುವಲ್ಲಿ ಕೆಲ ಹೆತ್ತವರು ನಿರತರಾಗಿದ್ದಾರೆ.

” ಒಳಿತನ್ನು ಬೋಧಿಸುವ, ಕೆಡುಕನ್ನು ವಿರೋಧಿಸುವ ಒಂದು ಸಮೂಹ ನಿಮ್ಮಲ್ಲಿರಲಿ ಅವರೇ ವಿಜಯಶಾಲಿಗಳು” ಎಂದು ಕಲಿಸಿದ ಧರ್ಮದ ಅನುಯಾಯಿಗಳಿಂದು ಮಾದಕ ವಸ್ತುಗಳಿಗಿಂತಲೂ ಅಧಿಕವಾಗಿ ಆನ್ಲೈನ್ ಆಟಗಳ ಮೊರೆ ಹೋಗಿ ತನ್ನ ಈಮಾನನ್ನು ನಷ್ಟಪಡಿಸುತ್ತಿರುವುದು ಖೇದಕರ.
ಲೂಡೋ, ಪಬ್ಜಿ ಇನ್ನಿತರ ಆನ್ಲೈನ್ ಆಟಗಳಲ್ಲಿ ನಿರತರಾಗಿರುವ ಯುವಕರಿಗೆ ಪಕ್ಕದ ಮಸೀದಿಯಿಂದ ಕೇಳಿಸುವ ಆಝಾನ್ ಕೂಡ ಗಮನಕ್ಕೆ ಬಾರದಂತಹ ರೀತಿಯಲ್ಲಿ ಆಟದಲ್ಲೇ ತಲ್ಲೀನರಾಗಿರುತ್ತಾರೆ.

ಕೇವಲ ಇದು ಯಾವುದಾದರೊಂದು ಪ್ರದೇಶದಲ್ಲಿ ಮಾತ್ರ ಸೀಮಿತವಾಗಿರುವುದು ಆಗಿದ್ದರೆ ಸಮಾಧಾನಪಟ್ಟುಕೊಳ್ಳಬಹುದಿತ್ತು.
ಬಹುತೇಕ ಕಡೆಗಳಲ್ಲಿ ಇದು ವ್ಯಾಪಿಸಿಕೊಂಡಿದೆ.
ರಾತ್ರಿಯಾದೊಡನೆ ಊರಿನ ಯಾವುದಾದರೊಂದು ಕಡೆ ಕುಳಿತುಕೊಂಡು ಗ್ರೂಪಾಗಿ ಆಡುವ ಯುವಕರಿಗೆ ನಂತರ ಅಲ್ಲೇನಾದರೂ ಕೂಡ ಗಮನಕ್ಕೆ ಬರುವುದಿಲ್ಲ.
ಜೋರಾಗಿ ಬೊಬ್ಬೆ ಹಾಕುತ್ತಾ ಆಟದಲ್ಲಿ ನಿರತರಾಗುವ ಇವರಿಗೆ ತಮ್ಮ ಶಬ್ದಗಳು ಇನ್ನೊಬ್ಬರಿಗೆ ತೊಂದರೆಯಾಗುತ್ತೆ ಅನ್ನುವ ಪರಿಜ್ಞಾನವೂ ಕೂಡ ಇರುವುದಿಲ್ಲ!

ಕೇವಲ ಯುವಕರು ಮಾತ್ರವಲ್ಲ. ಗ್ರೂಪಾಗಿ ಆಡುವ ಇಂತಹ ಆಟಗಳಲ್ಲಿ ಆನ್ಲೈನ್ ನಲ್ಲಿ ಬಹಳಷ್ಟು ಸಹೋದರಿಯರು ಕೂಡ ಕೈ ಜೋಡಿಸುತ್ತಿದ್ದಾರೆ.
ತಮ್ಮ ಶಬ್ದಗಳು ಇತರರಿಗೆ ಕೇಳಿಸುತ್ತಿದೆ ಅಂತ ಗೊತ್ತಿದ್ದರೂ ತಾನೇನೋ ಸಾಧನೆ ಮಾಡುತ್ತಿದ್ದೇನೆ ಅನ್ನುವಂತಹ ಭಾವನೆಯಲ್ಲಿ ಕೆಲ ಸಹೋದರಿಯರು ಆಟದಲ್ಲೇ ಮಗ್ನರಾಗಿರುತ್ತಾರೆ.
ಈ ಸಮಾಜದಲ್ಲಿ ಗಾಂಜಾ, ಮಾದಕ ವಸ್ತುಗಳು ಅದೆಷ್ಟರ ಮಟ್ಟಿಗೆ ಪರಿಣಾಮ ಬೀರಿದೆಯೋ ಅದಕ್ಕಿಂತಲೂ ಅಧಿಕವಾದ ಪರಿಣಾಮಗಳು ಮುಂದಿನ ದಿನಗಳಲ್ಲಿ ಈ ಆನ್ಲೈನ್ ಆಟಗಳಿಂದ ಸಮುದಾಯ ಅನುಭವಿಸುವುದರಲ್ಲಿ ಸಂಶಯವಿಲ್ಲ.

ಮಧ್ಯರಾತ್ರಿಯವರೆಗೂ ಆಟದಲ್ಲಿ ನಿರತರಾದವರಿಗೆ ನಮಾಝ್ ನ ಕುರಿತಾದ ಚಿಂತೆಯಿಲ್ಲ.
ಮನೆಯಲ್ಲಿ ಅದರ ಕುರಿತು ಪ್ರಶ್ನಿಸುವವರೂ ಇಲ್ಲ!
ದಾರಿ ತಪ್ಪಿದ ಮಕ್ಕಳ ಕುರಿತು ಎರಡು ರೀತಿಯಲ್ಲಿ ವಿಶ್ಲೇಷಿಸಲಾಗಿದೆ.
ಒಂದು ಅಮಿತವಾದ ಸ್ನೇಹವನ್ನು ಪಡೆದ ಮಕ್ಕಳು. ಇನ್ನೊಂದು ಸ್ನೇಹವನ್ನೇ ಪಡೆಯದ ಮಕ್ಕಳು. ಈ ಎರಡು ವಿಭಾಗದ ಮಕ್ಕಳೇ ಅಧಿಕವಾಗಿ ದಾರಿ ತಪ್ಪುತ್ತಿರುವುದು.
ಅಮಿತವಾದ ಸ್ನೇಹವನ್ನು ಪಡೆಯುತ್ತಿರುವ ಮಕ್ಕಳಿಗೆ ತನ್ನ ತಪ್ಪುಗಳ ಕುರಿತಾಗಿ ಭಯವಿರುವುದಿಲ್ಲ. ಸ್ನೇಹವನ್ನೇ ಪಡೆಯದ ಮಕ್ಕಳಿಗೆ ತನ್ನ ತಪ್ಪನ್ನು ಕೇಳುವವರು ಇಲ್ಲ ಅನ್ನುವ ಧೈರ್ಯವಿರುತ್ತದೆ.
ಆದುದರಿಂದ ಹೆತ್ತವರು ತಮ್ಮ ಮಕ್ಕಳ ಕುರಿತಾದ ಕಾಳಜಿಯನ್ನು ವಹಿಸಿಕೊಳ್ಳಬೇಕಿದೆ.

ಉಪದೇಶಗಳು ಕೇಳಿಸಿಕೊಳ್ಳುವಷ್ಟು ತಾಳ್ಮೆಯಿಲ್ಲದ ಸಮೂಹಕ್ಕೆ ಅದೆಷ್ಟೇ ಉಪದೇಶಗಳು ನೀಡಿದರೂ ಕೂಡ ಅದು ನೀರಿನಲ್ಲಿಟ್ಟ ಹೋಮದಂತಾಗುವುದಲ್ಲದೇ ಅದರಿಂದ ಯಾವುದೇ ಲಾಭವಿಲ್ಲವೆನ್ನುವುದಂತೂ ಸತ್ಯ.
ಆದರೂ ಒಳಿತನ್ನು ಬಯಸುವ ಮನಸ್ಸುಗಳು ಬದಲಾದರೆ ಅದೇ ಸಾರ್ಥಕ.
ಒಬ್ಬ ಸತ್ಯ ವಿಶ್ವಾಸಿಗೆ ಮರಣಕ್ಕಿಂತಲೂ ಉತ್ತಮವಾದ ಉಪದೇಶ ಇನ್ಯಾವುದೂ ಇಲ್ಲ.
ಪ್ರತಿಯೊಂದು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮರಣದ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ.ಅದು ಕಣ್ಣೆದುರಲ್ಲಿರುವ ವಾಸ್ತವ ಸತ್ಯವಾಗಿದೆ.

ಹದಿಹರೆಯಕ್ಕೆ ಕಾಲಿಡುವಾಗಲೇ ಈ ಐಹಿಕವಾದ ಲೋಕದಿಂದ ಮರೆಯಾದ ಅದೆಷ್ಟು ಮಂದಿಯಿದ್ದಾರೆ ನಮ್ಮ ನಡುವೆ?
ಅವರಿಗೂ ನಮ್ಮಂತೆಯೇ ಜೀವಿಸಬೇಕೆನ್ನುವ ಅದಮ್ಯವಾದ ಕನಸುಗಳಿತ್ತು.
ಇಂತಿಷ್ಟು ವರ್ಷಗಳ ಕಾಲ ನಾವೂ ಬದುಕುತ್ತೇವೆ ಅನ್ನುವ ಖಚಿತತೆ ನಮಗೂ ಇಲ್ಲ.
ಮತ್ಯಾಕೆ ನಾವು ಐಹಿಕವಾದ ಜೀವನದ ಮೋಹದೊಂದಿಗೆ ಅಲ್ಲಾಹನನ್ನು ಮರೆತು ಜೀವಿಸಬೇಕು…?

ಧಾರ್ಮಿಕತೆಯನ್ನು ಮರೆತು, ಕಾರಣಗಳಿಲ್ಲದೆ ನಮಾಝ್ ಗಳನ್ನು ತ್ಯಜಿಸಿ ಮೊಬೈಲ್ ನಲ್ಲಿ ಆನ್ಲೈನ್ ಆಟಗಳ ಮೊರೆ ಹೋಗಿ ಜೀವಿಸದಿರಿ.
ಜೀವನ ಅದು ಶಾಶ್ವತವಲ್ಲ. ಬದುಕಿರುವಷ್ಟು ದಿನ ಉತ್ತಮರಾಗಿ ಬದುಕಲು ಪ್ರಯತ್ನಿಸೋಣ.
ನಮ್ಮ ಒಳಿತು – ಕೆಡುಕುಗಳನ್ನು ನಿರ್ಧರಿಸುವವನು ಅವನಾಗಿದ್ದರೂ, ಸಾಧ್ಯವಾದಷ್ಟು ಕೆಡುಕುಗಳಿಂದ ದೂರವಿರೋಣ.

error: Content is protected !! Not allowed copy content from janadhvani.com