ಬೆಂಗಳೂರು:ನಿರಂತರವಾಗಿ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಏರಿಸುತ್ತಿರುವ ಕೇಂದ್ರ ಸರ್ಕಾರದ ಜನವಿರೋಧಿ ನಡೆಯ ವಿರುದ್ಧ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಿಡಿದೆದ್ದಿದ್ದಾರೆ.
ಕೊರೊನಾ ಸಂಕಷ್ಟದ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಕೊರೊನಾ ಸಂದರ್ಭದಲ್ಲಿ ದೇಶದ ಜನರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದುಇದೀಗ 35 ಡಾಲರ್ ಆಸುಪಾಸಿನಲ್ಲಿದೆ. ಹೀಗಿದ್ದರೂ ಪೆಟ್ರೋಲ್ ಬೆಲೆ ಇಂದು ದೇಶದಲ್ಲಿ 78.23 ಹಾಗೂ ಡಿಸೇಲ್ ದರ 70.52 ರ ಗಡಿ ದಾಟಿದೆ. ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಸರ್ಕಾರವು ನೇರವಾಗಿ ಜನರಿಗೆ ನೀಡುವುದರ ಬದಲಾಗಿ ಜನರಿಂದಲೇ ಹಣವನ್ನು ದೋಚುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಕಳೆದ ತಿಂಗಳು ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 10 ರಿಂದ 13 ರಷ್ಟು ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಆ ಸುಂಕ ಹೆಚ್ಚಳದಿಂದ ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕೇವಲ ತೈಲ ಕಂಪನಿಗಳಿಗೆ ಮಾತ್ರ ಹೊರೆಯಾಗಲಿದೆ ಎಂದು ಕೇಂದ್ರ ತಿಳಿಸಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಇದರ ಹೊರೆಯನ್ನು ಜನರ ಮೇಲೆ ಹಾಕಿದೆ ಎಂದಿದ್ದಾರೆ.
ಯುಪಿಎ ಆಡಳಿತಾವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 110 ಡಾಲರ್ ಗಡಿ ದಾಟಿದರೂ ದೇಶದಲ್ಲಿ ಬೆಲೆ ಇಂದಿನಷ್ಟು ಇಂಧನ ದರ ದುಬಾರಿಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಸುಂಕ ಹೆಚ್ಚಳ ವಾಪಸ್ ಪಡೆಯಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.