ಲೇಖನ:ಇಂಝಮುಲ್ ಹಕ್ ಬಜ್ಪೆ
ಆಧುನಿಕ ಜಗತ್ತಿನಲ್ಲಿ ಮಿತಿಮೀರಿದ ಬದಲಾವಣೆಯ ಪರಿಣಾಮಪ್ರಕ್ರತಿ ಎಷ್ಟೊಂದು ಪಾಠ ಕಲಿಸಿದೆ ಆದರೆ ಏನು ಮಾಡುವುದು, ಹೇಳಿ-ಕೇಳಿ ನಾವು ಮನುಷ್ಯರಲ್ವ....! ನಮಗೆ ನಮ್ಮದೇ ಆದ ಗೌರವ, ಘನತೆ, ಅಹಂಕಾರ, ಚಿಂತೆ, ಆಸೆ , ಸ್ಥಾನ ಮಾನ ಎಲ್ಲವೂ ಇದೆ, ನಾವು ಯಾವುದಕ್ಕೂ ಕಮ್ಮಿ ಇಲ್ಲ. ಪ್ರಕ್ರತಿ ವಿಕೋಪವನ್ನು ಎದುರಿಸಲು ಮನುಷ್ಯನ ಯಾವ ಶಕ್ತಿಯೂ ಸಾಲದು.ಪ್ರಕ್ರತಿ ವಿಕೋಪದ ಮುಂದೆ ಮನುಷ್ಯ ಮೂಕ ಪ್ರೇಕ್ಷಕನಾಗಲು ಮಾತ್ರ ಸಾದ್ಯ. ಕೇವಲ ಕೆಲವು ವರ್ಷಗಳಲ್ಲಿಯೇ ನಾವು ಎಷ್ಟೊಂದು ಪ್ರಕ್ರತಿ ವಿಕೋಪವನ್ನು ಎದುರಿಸಬೇಕಾಯಿತು.
ಕೇರಳ ಮುಳುಗುವುದನ್ನು ಅಸಹಾಯಕತೆಯಿಂತ ನೋಡುತ್ತಿದ್ದಂತೆಯೇ ವರ್ಷ ಕಳೆದು ಕರ್ನಾಟಕವೂ ಮುಳುಗತೊಡಗಿತು. ಕಷ್ಟ-ನಷ್ಟದ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ನಮ್ಮ ಕಣ್ಣ ಮುಂದೆಯೇ ರಾತ್ರಿ ಬೆಳಗಾಗುತ್ತಿದ್ದಂತೆಯೇ ಎಲ್ಲವನ್ನೂ ನೀರು ತನ್ನೊಂದಿಗೆ ಕರೆದುಕೊಂಡು ಹೋಯಿತು. ಈ ಪ್ರಕ್ರತಿ ವಿಕೋಪಕ್ಕೆ ಕಾರಣ ಹುಡುಕಲು ನಮ್ಮಿಂದ ಅಸಾಧ್ಯವಾದರೂ ಪ್ರಕ್ರತಿಯು ನಮಗೆ ನೀಡುವ ಸಂದೇಶವನ್ನು ಅಲ್ಪ ಯೋಚಿಸಿದರೂ ಹಲವಾರು ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಬಲಿಷ್ಠ ರಾಷ್ಟ್ರಗಳೆಲ್ಲಾ ಎಲ್ಲಾ ರೀತಿಯ ತಂತ್ರಜ್ಞಾನವನ್ನು ಉಪಯೋಗಿಸಿ ಶಸ್ತ್ರಾಸ್ತ್ರಗಳನ್ನು, ಟ್ಯಾಂಕರ್, ಮಿಲಿಟರಿ ಅಂಥ ಎಲ್ಲವನ್ನೂ ತಯಾರಿ ಮಾಡಿ ಇಟ್ಟಿದ್ದರು ಆದರೆ ವಿಧಿಯ ಆಟ ನೋಡಿ, ಮನುಷ್ಯನ ದೌರ್ಬಲ್ಯತೆ ಅಥವ ಅಸಹಾಯಕತೆಯನ್ನು ಕೇವಲ ನೀರು ಮತ್ತು ಗಾಳಿಯಿಂದಲೇ ಕಂಡೆವು.
“ಇಡೀ ವಿಶ್ವಕ್ಕೇ ದೊಡ್ಡನ್ನನಾದರೂ ಅವನೊಬ್ಬ ಮನುಷ್ಯ, ಅಷ್ಟೇ ಅವನ ಶಕ್ತಿ.”
ಈ ಸಾಮಾಜಿಕ ಅಂತರ ಅಂಥ ನಾವೀಗ ಏನು ನಿಯಮ ಪಾಲಿಸುತ್ತೇವಲ್ಲಾ. ಈ ಕೊರೋನ ಬರುವುದಕ್ಕಿಂತ ಮುಂಚೆ ನಾವು ಅಂತರದಲ್ಲಿರಲಿಲ್ಲವೇ…!? ನಾನು ಕೇವಲ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ, ಸರಿ ಮತ್ತು ತಪ್ಪು ಯಾವುದೆಂದು ನೀವೇ ನಿರ್ಧರಿಸಬೇಕು. ಈ Modern days ಅಥವಾ ಡಿಜಿಟಲ್ ಯುಗ ಅಂಥ ನಾವೀಗ ಕರೆಯುತ್ತೇವಲ್ಲಾ, ಅದರ ಕಾರಣದಿಂದಾಗಿ ನಾವೆಷ್ಟು ಸಾಮಾಜಿಕ ಅಂತರ ಪಾಲಿಸಿಕೊಂಡಿದ್ದೆವು ಎಂದು ಸ್ವಲ್ಪ ಚಿಂತಿಸಿ…!
ಆನ್ಲೈನ್ ಸೌಲಭ್ಯದೊಂದಿಗೆ ನಾವಿದ್ದಲ್ಲಿಯೇ ಆರ್ಡರ್ ಮಾಡಿ ನಮಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ನಮ್ಮ ಮನೆ ಬಾಗಿಲಿಗೆ ತರಿಸುತ್ತಿದ್ದೇವೆ. 50 ರೂಪಾಯಿಯ ಒಂದು
ಐಸ್-ಕ್ರೀಮ್ ಅನ್ನು ಹನ್ನೆರಡು ಕಿ.ಮಿ ದೂರದಲ್ಲಿರುವ ಒಬ್ಬ ವ್ಯಕ್ತಿ ಆನ್ಲೈನ್’ನಲ್ಲಿ ಆರ್ಡರ್ ಮಾಡಿ ಸ್ವಿಗ್ಗೀ ಮೂಲಕ ತರಿಸುತ್ತಾನೆ.
ಫ್ರೀ ಡೆಲಿವರಿ ಸೌಲಭ್ಯ ನೀಡುವವರಿರುವಾಗ ನಾವೇಕೆ ಮನೆಯಿಂದ ಆಚೆ ಅಂಗಡಿ ತನಕ ಹೋಗಬೇಕು.ಗೂಗಲ್ ಮ್ಯಾಪ್ ಇರುವಾಗ ಯಾಕೆ ಸೈನ್ ಬೋರ್ಡ್ ನೋಡಬೇಕು ಅಥವಾ ಕಾರು ನಿಲ್ಲಿಸಿ ರಸ್ತೆ ಬದಯಲ್ಲಿರುವವನೊಂದಿಗೆ ಯಾಕೆ ಕೇಳಬೇಕು…! ವಾಟ್ಸಪ್’ನಲ್ಲಿ ನಾವು ಮೆಸೇಜ್ ಮಾಡುತ್ತೇವಲ್ಲಾ ಅದು ಸಾಕು, ಇನ್ನು ನೇರವಾಗಿ ಸಿಗುವ ಅವಶ್ಯಕತೆಯಾದರೂ ಏನಿದೆ..? ಯೂಟ್ಯೂಬ್’ನಲ್ಲಿ ನನಗೆ ಟೈಂ ಪಾಸ್ ಆಗುವಾಗ ನಾನೇಕೆ ಹೊರಗಡೆ ಸುತ್ತಾಡಬೇಕು. ಕುಟುಂಬ ಸಂಬಂಧಿಗಳು ವಾಟ್ಸಪ್'ನ ಫ್ಯಾಮಿಲಿ ಗ್ರೂಪ್'ನಲ್ಲಿ ಸಿಗುತ್ತಾರೆ. ಹೀಗೆ ಅಧುನಿಕ ಜಗತ್ತಿನಲ್ಲಿ ಎಲ್ಲವೂ ಬದಲಾಗಿದೆ ಹಾಗಂತ ನಾವೂ ಕೂಡ ಅದಕ್ಕೆ ಸಮಾನವಾಗಿ ಬದಲಾಗುತ್ತಿದ್ದೇವೆ.
ಈ ಸೌಲಭ್ಯಗಳನ್ನೆಲ್ಲಾ ಉಪಯೋಗಿಸುವುದು ತಪ್ಪು ಅಂತ ನಾನು ಹೇಳುತ್ತಿಲ್ಲ ಆದರೆ ಈ ಎಲ್ಲಾ ಸೌಲಭ್ಯಗಳನ್ನು ಕೆಲವೊಂದು ಅಗತ್ಯ ಸಂದರ್ಭದಲ್ಲಿ ಅದರ ಉಪಯೋಗ ಪಡೆದುಕೊಳ್ಳಬೇಕೆಂದು ನನ್ನ ಭಾವನೆ. ಹಿಂದೆಲ್ಲಾ ಎಷ್ಟೊಂದು ಜನರ ಫೋನ್ ನಂಬರ್'ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು, ಯಾವುದೇ ಗೂಗಲ್ ಮ್ಯಾಪ್'ನ ಸಹಾಯವಿಲ್ಲದೆ ಕೇವಲ ಸೈನ್ ಬೋರ್ಡ್'ಗಳನ್ನು ನೋಡಿ ಮತ್ತು ಜನರೊಂದಿಗೆ ರಸ್ತೆ ಕೇಳಿ ದೂರ ದೂರಕ್ಕೂ ಪ್ರಯಾಣಿಸುತ್ತಿದ್ದೆವು. ಈಗಲೂ ಪ್ರಯತ್ನಿಸಿ ನೋಡಿ ನಿಮ್ಮ ನೆನಪಿನ ಶಕ್ತಿ ಎಷ್ಟರ ಮಟ್ಟಕ್ಕೆ ಬಲಿಷ್ಠವಾಗಿದೆಯೆಂದು ತಿಳಿಯುತ್ತೆ. ಎಲ್ಲವನ್ನೂ ಆನ್ಲೈನ್ ಮೂಲಕ ಆರ್ಡರ್ ಮಾಡದೆ ಕೆಲವೊಂದು ಸಾರಿ ಮನೆಯಿಂದ ಹೊರಗಡೆ ಹೋಗಬೇಕು. ಜನರೊಂದಿಗೆ ಬೆರೆಯಬೇಕು, ರಸ್ತೆಗಳಲ್ಲಿ ಹಲವರು ಪರಿಚಯಗೊಳ್ಳುತ್ತಾರೆ, ಅಂಗಡಿಗಳಲ್ಲಿ ಪರಿಚಯಸ್ತರು ಸಿಗುತ್ತಾರೆ. ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳುವ ಹಿತೈಷಿಗಳು ಸಿಗುತ್ತಾರೆ. ಬಾಲ್ಯದಲ್ಲಿ ಒಮ್ಮೆ ನಾನು ಅಂಗಡಿಗೆ ಹಾಲು ತರಲು ಹೋಗಿ ಅಲ್ಲಿ ಒಂದು ಮೂರು ಜನ ಪರಿಚಯಸ್ತರೊಂದಿಗೆ ಮಾತನಾಡಿ ಬರುವಾಗ ಮನೆಯಲ್ಲಿ ಎಲ್ಲರೂ ತುಂಬಾ ಕೋಪಗೊಂಡಿದ್ದರು ಯಾಕೆಂದರೆ ಅಲ್ಲಿ ಅವರೊಂದಿಗೆ ಮಾತನಾಡಿ ಮನೆಗೆ ಹಿಂತಿರುಗುವಾಗ ಗಂಟೆಗಳೇ ಕಳೆದುಹೋಗಿತ್ತು. ಈಗ ಅದಕ್ಕಿಂತ ಹೆಚ್ಚು ಸಮಯ ವ್ಯರ್ಥ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್'ನಲ್ಲಾಗುತ್ತೆ ಆದರೆ ಮನಸ್ಸಿಗೆ ಯಾವುದೇ ರೀತಿಯ ಉತ್ತಮ ಪ್ರಭಾವ ಬೀರದೆ ಚಿಂತೆಗಳನ್ನೇ ಆ ಫೋನ್'ಗಳು ಉದ್ಭವಿಸುತ್ತದೆಯೇ ಹೊರತು ಚಿಂತನೆಗಳನ್ನಲ್ಲ. ಬ್ಯುಸಿ ಲೈಫ್'ನಲ್ಲಿ ಮನಸ್ಸಿನ ಅಗತ್ಯತೆಯನ್ನೂ ಪೂರೈಸಲು ನಾವು ಪ್ರಯತ್ನಿಸಬೇಕು. ಜನರೊಂದಿಗೆ ಬೆರೆಯುವ ಪ್ರಯತ್ನ ಮಾಡಬೇಕು. ಸಮಯ ತೆಗೆದುಕೊಂಡು ರಸ್ತೆಯಲ್ಲಿ ನಡೆಯಬೇಕು, ಕಾರು-ಬೈಕ್'ಗಳಿಂದಾಚೆ ಒಂದು ಜಗತ್ತಿದೆ ಅದರೊಂದಿಗೆ ಸಂಪರ್ಕ ಬೆಳೆಸಬೇಕು. ಮನೆಯ ಅಂಗಳದಲ್ಲಿ ಗಿಡ ನೆಟ್ಟು ದಿನಾ ನಾವೇ ನೀರು ಹಾಕುವ ಅಭ್ಯಾಸ ಮಾಡಬೇಕು. ವಿಸ್ಮಯ ಜಗತ್ತಿನ ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಬೆಳೆಸಬೇಕು. ಕೆಲವೊಂದು ಸಲ ನಮಗೆ ಹಲವು ವಿಚಾರ ತಿಳಿದಿದ್ದರೂ ಅನುಭವಸ್ತರ ಮತ್ತು ಹಿರಿಯರ ಸಲಹೆಗಳನ್ನು ಪಡೆಯಬೇಕು, ಅದು ಅವರಿಗೆ ಗೌರವ ನೀಡುವ ವಿಚಾರಗೊಳಪಡುತ್ತೆ. ನಾವು ಯಂತ್ರೋಪಕರಣಗಳಂತೆ ಜೀವಿಸುವುದನ್ನು ಬಿಟ್ಟು ಮನುಷ್ಯರಂತೆ ಜೀವಿಸಬೇಕು. ನಮಗೆ ಕೆಲವು ವಿಚಾರಗಳಷ್ಟೇ ತಿಳಿದಿದೆ, ಹಲವಾರು ವಿಚಾರಗಳು ಇನ್ನೂ ತಿಳಿದಿಲ್ಲ. ಅದು ಈ ಸಮಾಜದಿಂದ ಕಲಿಯಬೇಕಿದೆ, ಪ್ರಕ್ರತಿಯಿಂದ ತಿಳಿದುಕೊಳ್ಳಬೇಕು.
ಬೆಳ್ಳಂಬೆಳಿಗ್ಗೆ ಇಡೀ ಜಗತ್ತನ್ನೇ ಮೈಲುಗಟ್ಟಲೆ ತಿರುಗಿ ಸಂಜೆ ಹಿಂತಿರುಗುವ ಪಕ್ಷಿಗಳಿಂದ ಕಲಿಯಬೇಕಿದೆ, ಪಕ್ಷಿಗಳು ತಮ್ಮ ವಾಸಕ್ಕೆ ಕಟ್ಟುವ ಗೂಡಿನ ಬಗ್ಗೆ ತಿಳಿದಿದ್ದೀರ..?ಮನೆ ಕಟ್ಟುವ ಮನುಷ್ಯನು ಪಕ್ಷಿಗಳು ಕಟ್ಟುವ ಗೂಡಿನ ರಹಸ್ಯದ ಹಲವು ವಿಚಾರಗಳಿಂದ ಪ್ರೇರಿತನಾಗಬಹುದು. ನಾವು ಕಡಿಯುವ ಗಿಡ ಮರಗಳಿಂದ ಭೂಮಿಯಲ್ಲಿ ನೀರು ಇಂಗುವ ಶಕ್ತಿಯ ಬಗ್ಗೆ ತಿಳಿಯದೆ ಅದರ ಪರಿಣಾಮವನ್ನು ಎದುರಿಸುತ್ತಿದ್ದೇವೆ.
“ಇದು ವಿಸ್ಮಯ ಜಗತ್ತು, ಇಲ್ಲಿ ಮನುಷ್ಯನ ಚಿಂತನೆಗೆ ಮೀರಿದ ರಹಸ್ಯವಿದೆ”