✍️mkm ಕಾಮಿಲ್ ಸಖಾಫಿ ಕೊಡಂಗಾಯಿ
ಬಹಳಷ್ಟು ದಿನಗಳಿಂದ ಕಾಣುತ್ತಿದ್ದ ಕನಸುಗಳು ಸಾಕ್ಷಾತ್ಕಾರಗೊಂಡಿದೆ. ವಿದ್ಯಾಭ್ಯಾಸ ಮಂಡಳಿ, ಅಧ್ಯಾಪಕ, ರಕ್ಷಕ ಮತ್ತು ವಿದ್ಯಾರ್ಥಿ ಬಳಗದಲ್ಲಿ ಸಂತೋಷದ ರೆಕ್ಕೆಗಳು ಸೃಷ್ಟಿಯಾಗಿದೆ. ಪ್ರತಿನಿತ್ಯವೂ ಬೆಳಿಗ್ಗೆ ಬೇಗನೆ ಎದ್ದು ಕಾರ್ಯಚಟುವಟಿಕೆಗಳಲ್ಲಿ ತಲ್ಲೀನರಾಗಲು ಮನಸ್ಸಿನಲ್ಲಿ ನವೋಲ್ಲಾಸ ಉಂಟಾಗಿದೆ. ವ್ಯರ್ಥವಾಗುತ್ತಿದ್ದ ಸಮಯಗಳಲ್ಲಿ ಹಲವು ಒಳಿತಿಗೆ ಮೀಸಲಾಗುತ್ತಿದೆ. ಮನ-ಮನೆಗಳಲ್ಲಿ ಭುಗಿಲೇಳುತ್ತಿದ್ದ ಆಟ- ಅಡಚನೆಗಳಲ್ಲಿ ಹೆಚ್ಚಿನವುಗಳಿಗೆ ಕಡಿವಾಣ ಬಿದ್ದಿದೆ.
ಇದಕ್ಕೆಲ್ಲ ಕಾರಣ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮಂಡಳಿಯು ಆರಂಭಿಸಿದ ಆನ್ಲೈನ್ ತರಗತಿಯಾಗಿರುತ್ತದೆ. ಆನ್ಲೈನ್ ತರಗತಿಗಳ ಕುರಿತು ಜನರ ಹೃದಯದಲ್ಲಿದ್ದ ಆತಂಕಗಳು ಸಂಪೂರ್ಣವಾಗಿ ದೂರ ಸರಿದಿದೆ. ಬೆಟ್ಟಗಳಷ್ಟು ಆತ್ಮವಿಶ್ವಾಸ ಮತ್ತು ಆಶ್ವಾಸನೆಗಳನ್ನು ನೀಡುತ್ತಾ ಈ ಕ್ಲಾಸ್ ಎರಡು ದಿನವನ್ನು ಮುಗಿಸಿ ಬಿಟ್ಟಿದೆ.
ಸಮಸ್ಯೆಗಳು ಪರಿಹರಿಸಲ್ಪಟ್ಟಿತು
ಮಹಾಮಾರಿ ನೋವೆಲ್ ಕೊರೋನಾವು ಉಂಟುಮಾಡಿದ್ದ ನಾಶ-ನಷ್ಟಗಳು ಅಷ್ಟಿಷ್ಟಲ್ಲ. ಜನರ ಜೀವನ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ರೋಗವು ವಿದ್ಯಾರ್ಥಿಗಳ ಪಾಲಿಗಂತೂ ದೊಡ್ಡ ವಿಲನ್ ಆಗಿತ್ತು.! ಅರಿವು ಬಯಸಿ ದೈನಂದಿನ ವಿದ್ಯಾಲಯಗಳಿಗೆ ತೆರಳಿ ವಿದ್ಯಾರ್ಜನೆ ಮಾಡುತ್ತಿದ್ದ ಮಕ್ಕಳೆಲ್ಲರೂ ಶಾಲೆ ಮತ್ತು ಮದ್ರಸಗಳ ಬಂದ್ ಕಾರಣ ಮನೆಯಲ್ಲೇ ಉಳಿಯುವಂತಾಗಿದೆ.
ಶಿಕ್ಷಣ ಮಂಡಳಿಯಿಂದಲೂ ಏನನ್ನೂ ಮಾಡಲು ಸಾಧ್ಯವಾಗದ ಸ್ಥಿತಿಯು ಸಂಜಾತವಾಗಿತ್ತು. ರೋಗದ ಸ್ಥಿತಿಯು ಅಬ್ಬರದಿಂದಲೇ ಮುನ್ನುಗ್ಗುವುದನ್ನು ಕಂಡಾಗ ಆನ್ಲೈನ್ ತರಗತಿಯು ಉಳಿದಿರುವ ಏಕೈಕ ಪರಿಹಾರ ದಾರಿಯಾಗಿತ್ತು. ಒಂದೇ ಸೂರಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಅಕ್ಷರಗಳನ್ನು ಕಲಿಸಲು ಅಸಾಧ್ಯವಾದ ಕಾರಣದಿಂದ ಶಿಕ್ಷಣ ಸಮುಚ್ಚಯಗಳು ಓಪನ್ ಮಾಡುವುದನ್ನು ಮುಂದೂಡುವುದು ಅನಿವಾರ್ಯವಾಗಿತ್ತು.
ಇಂತಹ ಸಂದಿಗ್ದ ಸ್ಥಿತಿಯಲ್ಲಿ ಕೇರಳವನ್ನು ಕೇಂದ್ರವಾಗಿಸಿ ಕಾರ್ಯಾಚರಿಸುವ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಇದರ ಕಾರ್ಯಾಚರಣೆಯು ಶ್ಲಾಘನೀಯವಾಗಿದೆ. ಎಲ್ಲಾ ಒತ್ತಡಗಳನ್ನು ತಲೆಯ ಮೇಲಿಟ್ಟು ಆನ್ಲೈನ್ ತರಗತಿಗೆ ಮುಂದಡಿಯಿಟ್ಟಾಗ ರಕ್ಷಕರಿಗಿಂತಲೂ ವೀಕ್ಷಕರ ಆತಂಕವೇ ಅಪರಿಮಿತವಾಗಿತ್ತು. ಆನ್ಲೈನ್ ಶಿಕ್ಷಣವು ಪರಿಣಾಮಕಾರಿಯಾಗದೆಂದು ಬಹಳಷ್ಟು ಜನರು ಒತ್ತಿ ಹೇಳಿದ್ದರು. ಕೆಲವರಂತೂ ಪರಿಹಾಸದ ಮಾತುಗಳನ್ನು ಹಾರವಾಗಿ ಹಾಕಿದ್ದರು.ಯಾವುದಕ್ಕೂ ಎದೆಗುಂದದೆ ಯಾರ ಅವಹೇಳನಕ್ಕೂ ಕಿವಿಗೊಡದೆ ಕಾರ್ಯಾಚರಿಸಿ ಅನುಭವವಿರುವ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮಂಡಳಿಯು ಇಲ್ಲಿಯೂ ಹಿಂತಿರುಗಿ ನೋಡಲಿಲ್ಲ.!!
ತನ್ನ ಹೆಜ್ಜೆಯನ್ನು ಮುಂದಿಡುತ್ತಾ ನಡೆಯತೊಡಗಿತ್ತು. ಆ ನಡತೆಗೆ ಬೇಗನೇ ವೇಗ ಸಿಕ್ಕಿತು. ಅದರ ಯಶಸ್ವಿಯೇ ಇಂದು ನಡೆಯುತ್ತಿರುವ ಆನ್ಲೈನ್ ತರಗತಿಗಳು.
1ನೇ ತರಗತಿಯಿಂದ ಹಿಡಿದು 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳನ್ನು ಆನ್ಲೈನ್ ಮೂಲಕ ತರಗತಿ ನೀಡುವಲ್ಲಿ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮಂಡಳಿಯು ಯಶಸ್ವಿಯಾಗಿದೆಯೆಂಬುದನ್ನು ಜನರೇ ಅಂಗೀಕರಿಸಿಯಾಗಿದೆ.
ಪ್ರತಿಯೊಂದು ತರಗತಿಗಳು ಆಕರ್ಷಣೆಯಾಗಿ ಜನ-ಮನ ಗೆಲ್ಲುವಲ್ಲಿ ಯಶಸ್ವಿಯಾಗಿ ಕೀರ್ತಿಯ ಶಿಖರವನ್ನೇರಿದೆ. ಮೊದಲಿನ ದಿನದ ತರಗತಿಯ ಯಶಸ್ವಿಯನ್ನು ಎರಡನೇ ದಿನವು ಮೀರಿ ನಿಂತಿದೆ. ಕೇವಲ ಒಂದೇ ದಿನದಲ್ಲಿ ಮದ್ರಸ ಮೀಡಿಯಾ ಎಂಬ ಯೂಟ್ಯೂಬ್ ಚಾನೆಲಿಗೆ ಒಂದು ಲಕ್ಷಕ್ಕಿಂತಲೂ ಅಧಿಕ ಜನರು ಸಬ್ಸ್ಕ್ರೈಬ್ ಆಗುವ ಮೂಲಕ ಚಂದಾದಾರರಾಗಿ ಸಹಕಾರವನ್ನು ತೋರಿಸಿದ್ದಾರೆ.
ಪ್ರತಿಯೊಂದು ತರಗತಿಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ತರಗತಿಯ ವೀಡಿಯೋಗಳನ್ನು ಅಪ್ಲೋಡ್ ಮಾಡಿದ ನಿಮಿಷಾರ್ಧದಲ್ಲೇ ಜನರು ವೀಕ್ಷಿಸಲು ಮುಗಿಬೀಳುವುದನ್ನು ಕಾಣಲಾಗುತ್ತದೆ. ತರಗತಿಗಳಲ್ಲಿ ಸಿಗುತ್ತಿರುವ ಮಾಹಿತಿಗಳನ್ನು ಕಲೆಹಾಕಿ ವಿದ್ಯಾರ್ಥಿಗಳು ಕಲಿಯುವುದರೊಂದಿಗೆ ಪ್ರಯೋಜನಕ್ಕೆ ತರುತ್ತಿದ್ದಾರೆ.
ಹೆಚ್ಚುತ್ತಿರುವ ಉಸ್ತಾದರ ಸೇವೆಗಳು
ಆನ್ಲೈನ್ ಕ್ಲಾಸ್ ಆರಂಭಗೊಂಡರೆ ಅಧ್ಯಾಪಕರಿಗೆ ಕೆಲಸ ಇರದೆಂದು ಕೆಲವೊಂದು ಜನರು ಭಾವಿಸಿ ಉಸ್ತಾದರು ಮದ್ರಸಕ್ಕೆ ಬರಬೇಕಾದ ಅಗತ್ಯವಿಲ್ಲವೆಂದು ಹೇಳಿಬಿಟ್ಟಿದ್ದರು. ಆದರೆ ತರಗತಿ ಆರಂಭಗೊಂಡ ಬಳಿಕ ಗಮನವಿಟ್ಟು ಕೇಳಿದಾಗ ಅಧ್ಯಾಪಕರ ಅಗತ್ಯತೆ ಎಲ್ಲರಿಗೂ ಮನದಟ್ಟಾಯಿತು. ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಕಲಿಕೆಯಲ್ಲಿ ಅಧ್ಯಾಪಕರ ಪಾತ್ರ ಹಿರಿದಾಗಿದೆ. ಆನ್ಲೈನ್ ತರಗತಿ ಕೂಡ ಅದಕ್ಕಿಂತ ಭಿನ್ನವಲ್ಲ.
ಇಲ್ಲಿಯೂ ಅಧ್ಯಾಪಕರ ಸಹಾಯವು ಅತ್ಯಗತ್ಯವಾಗಿರುತ್ತದೆ. ತರಗತಿಯನ್ನು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕುಳಿತು ಆಸ್ವಾದನೆ ಮಾಡುವುದಾದರೂ ಅದರಲ್ಲಿ ಬರುವ ವಿಷಯಗಳನ್ನು ಬರೆದಿಡಲು, ತಪ್ಪುಗಳನ್ನು ತಿದ್ದಿಕೊಳ್ಳಲು ಅಧ್ಯಾಪಕರ ಸಹಕಾರವು ಹಿಂದೆಂದಿಗಿಂತಲೂ ಅಧಿಕವಾಗಿರುತ್ತದೆ. ವಿದ್ಯಾರ್ಥಿಗಳು ತರಗತಿ ಮುಗಿದ ನಂತರ ಅದನ್ನು ಬರೆದು ಅಧ್ಯಾಪಕರಿಗೆ ಕಳಿಸಿಕೊಡುತ್ತಾರೆ. ಉಸ್ತಾದ್ ಅದನ್ನು ತಿದ್ದುಪಡಿಗೆ ಒಳಪಡಿಸಿ ಸರಿಪಡಿಸಲು ಸೂಚಿಸುತ್ತಾರೆ. ಸರಿ ಮಾಡಿದ ಬಳಿಕ ಅವರು ಮತ್ತೆ ಅದನ್ನು ಉಸ್ತಾದರಿಗೆ ಕಳುಹಿಸುವರು. ಅಷ್ಟರ ತನಕ ಅಧ್ಯಾಪಕರು ಅವನ/ಳನ್ನೇ ಫೋಲೋ ಮಾಡುತ್ತಾರೆ. ತರಗತಿಯ ಎಲ್ಲಾ ವಿದ್ಯಾರ್ಥಿಗಳು ತಾವು ಬರೆದದ್ದನ್ನು ಕಳುಹಿಸಿದ ಬಳಿಕ, ಸಂಪೂರ್ಣವಾಗಿ ಸರಿಪಡಿಸಿದ ಬಳಿಕವೂ ಅಧ್ಯಾಪಕರ ಕೆಲಸ ಮುಂದುವರಿಯುತ್ತದೆ.
ಇದಲ್ಲಾ ಒಂದು ವಿದ್ಯಾರ್ಥಿಯ ವಿಷಯ ಮಾತ್ರ. ಅಧ್ಯಾಪಕರಿಗೆ ತರಗತಿಯಲ್ಲಿ ಇಂತಹ ಹಲವು ವಿದ್ಯಾರ್ಥಿಗಳಿರುತ್ತಾರೆ. ಇನ್ನು ಕೆಲವೊಂದು ಅಧ್ಯಾಪಕರಿಗೆ ಒಂದಕ್ಕಿಂತಲೂ ಹೆಚ್ಚು ತರಗತಿಗಳು ಇರುತ್ತದೆ. ಎಲ್ಲಾ ದಿನದಲ್ಲಿಯೂ ತರಗತಿಯನ್ನು ವೀಕ್ಷಿಸಬೇಕು. ವಿದ್ಯಾರ್ಥಿಗಳಿಗೆ ತಿದ್ದುಪಡಿ ಮಾಡಿಸಬೇಕು. ವಿದ್ಯಾರ್ಥಿಗಳು ಕಲಿಯುತ್ತಿರುವುದನ್ನು ಖಚಿತಪಡಿಸಬೇಕು. ಹೀಗೆ ಹಲವು ಒತ್ತಡದ ಕೆಲಸಗಳು ಅಧ್ಯಾಪಕರಿಗೆ ಇರುವುದರಿಂದ ಅವರ ಉಪಸ್ಥಿತಿಯು ಅನಿವಾರ್ಯವೆನಿಸುತ್ತದೆ. ಅವರ ಕೆಲಸವೂ ಅಧಿಕವಾಗಿದೆ. ಆದ್ದರಿಂದ ಅಧ್ಯಾಪಕರ ಅಗತ್ಯವಿಲ್ಲ ಎಂಬ ನಿರ್ಧಾರದಿಂದ ಹಿಂದೆ ಸರಿಯದೇ ನಿರ್ವಾಹವಿಲ್ಲ.
ಲಾಕ್ಡೌನ್ ಮುಗಿದರೂ ಕೆಲಸ ಮುಗಿಯದು
ಒಂದೆರಡು ತಿಂಗಳು ಮುಗಿಯುವಾಗ ಸಮಸ್ಯೆಗಳು ಮುಗಿಯಲೂಬಹುದು. ಹಾಗಾದರೆ ನಮ್ಮ ಶಿಕ್ಷಣಾಲಯಗಳು ಓಪನ್ ಆಗಬಹುದು ಎಂದೆಲ್ಲಾ ಶಿಕ್ಷಣ ತಜ್ಞರು, ಚಿಂತಕರು ನುಡಿಯುತ್ತಿದ್ದಾರೆ. ಒಂದು ವೇಳೆ ನಾವು ಅಂದು ಕೊಂಡಂತೆಯಾದರೆ ಆ ಬಳಿಕ ನಮ್ಮ ವಿದ್ಯಾಲಯಗಳು ತೆರೆಯಲ್ಪಡುತ್ತದೆ.
ವಿದ್ಯಾಲಯಗಳು ಓಪನ್ ಆದಾಗ ಅಧ್ಯಾಪಕರು ಆರಂಭದಿಂದಲೇ ವಿದ್ಯಾರ್ಥಿಗಳ ಕಲಿಕೆಯನ್ನು ಖಾತರಿಸಬೇಕಾಗಿದೆ.
ಎರಡು ತಿಂಗಳಲ್ಲಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಕಲಿತಿದ್ದಾರೆಂದು ಭಾವಿಸಿ ಸುಮ್ಮನಿರಲು ಅಧ್ಯಾಪಕರಿಂದ ಸಾಧ್ಯವಿಲ್ಲ. ಅಧ್ಯಯನ ನಡೆಸಿದ್ದನ್ನು ದೃಢವಾಗಿಸಲು ಪುನರಾವರ್ತನೆಯು ಅಗತ್ಯವೆನಿಸುತ್ತದೆ. ಅದೆಲ್ಲವೂ ಅಧ್ಯಾಪಕರಿಗೆ ಪ್ರತ್ಯೇಕವಾದ ತರಬೇತಿ ಮುಖಾಂತರ ವಿದ್ಯಾಭ್ಯಾಸ ಮಂಡಳಿಯು ನೀಡುವುದರಿಂದ ಎಲ್ಲವನ್ನು ಸುಸೂತ್ರವಾಗಿ ಮಾಡಲು ಅಧ್ಯಾಪಕರ ತಂಡವು ಕಟ್ಟಿಬದ್ಧವಾಗಿದೆ. ಆದುದರಿಂದ ಅಧ್ಯಾಪಕರಿಗೆ ನಾವು ಹೆಗಲುಕೊಟ್ಟು ಸಹಕರಿಸೋಣ. ನಮ್ಮ ಮಕ್ಕಳ ಬೆಳವಣಿಗೆಯಲ್ಲಿ ಅವರ ಪಾತ್ರವನ್ನು ಗುರುತಿಸೋಣ.!
ಈ ಸಮಾಜವು ಯಶಸ್ವಿಯ ಕಡೆಗೆ ದಾಪುಗಾಲಿಡುವುದರಲ್ಲಿ ಅಧ್ಯಾಪಕರ ಸೇವೆಯು ಅವಿಸ್ಮರಣೀಯವಾಗಿದೆ.!