ಮಂಗಳೂರು: ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಈಡಾಗಿದ್ದ ಮಂಗಳೂರು -ಕಾಸರಗೋಡು ಗಡಿ ಪ್ರವೇಶ, ಇದೀಗ ಸಂಚಾರ ಪಾಸ್ ಗೊಂದಲಕ್ಕೆ ಸಿಲುಕಿದೆ.
ದೈನಂದಿನ ಚಟುವಟಿಕೆಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಕಾಸರಗೋಡು ಕನ್ನಡಿಗರಿಗೆ ತುರ್ತು ಪಾಸ್ ನೀಡುವುದಕ್ಕಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಗಡಿ ತಲಪಾಡಿಯಲ್ಲಿ 3 ಸಹಾಯ ಕೇಂದ್ರಗಳನ್ನು (ಹೆಲ್ಪ್ ಡೆಸ್ಕ್) ಸ್ಥಾಪಿಸಿ, ಅಲ್ಲಿಯೇ ಪಾಸ್ ವಿತರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.
ಮತ್ತೆ ಸಮಸ್ಯೆಗಳು ಏನಾದರೂ ಬಂದರೆ ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಕಾಸರಗೋಡು ಕನ್ನಡಿಗರಿಗೆ ಅವರು ಮನವಿ ಮಾಡಿದ್ದಾರೆ.
2 ಜಿಲ್ಲೆಗಳ ನಡುವೆ ನಿತ್ಯ ಓಡಾಡುವವರಿಗೆ ಸಮರ್ಪಕ ಪಾಸ್ ವಿತರಣೆ ಆಗದೆ ಗೊಂದಲ ಏರ್ಪಟ್ಟಿತ್ತು. ಕಾಸರಗೋಡು ಕಡೆಯಿಂದ ಸುಮಾರು 2000ಕ್ಕೂ ಹೆಚ್ಚು ಅರ್ಜಿಗಳು ಪಾಸ್ಗಾಗಿ ಬಂದಿದ್ದು, ಭಾನುವಾರ ತನಕ 400 ಪಾಸ್ಗಳ ವಿತರಣೆಯಾಗಿವೆ. ಉಳಿದ ಅರ್ಜಿಗಳು ಆಧಾರ್ ಕಾರ್ಡ್ ಸಹಿತ ಸಮರ್ಪಕ ದಾಖಲೆಗಳು ಇಲ್ಲವೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಪಾಸ್ ವಿತರಣೆಯನ್ನು ಸ್ಥಗಿತಗೊಳಿಸಿತ್ತು ಎಂದು ಮೂಲಗಳು ತಿಳಿಸಿವೆ.