ಕಲಬುರ್ಗಿ: ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಲಬುರ್ಗಿಗೆ ಆಗಮಿಸಿದ ಅವರು, ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವ ಸಿದ್ಧತಾ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕೊರೋನಾ ಸೋಂಕು ವ್ಯಾಪಕಗೊಂಡ ನಂತರ ಎಲ್ಲಾ ಕಡೆ ಆನ್ ಲೈನ್ ಶಿಕ್ಷಣದ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ ಚಿಕ್ಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಸೂಕ್ತವೂ ಅಲ್ಲ. ಆನ್ ಲೈನ್ ಮುಖ್ಯ ಬೋಧನೆಯಾಗಲ್ಲ. ಅದೊಂದು ಪೂರಕವಾದ ಬೋಧನೆಯಾಗುತ್ತೆ. ಹೀಗಾಗಿ ಆನ್ ಲೈನ್ ಶಿಕ್ಷಣಕ್ಕೆ ನನ್ನ ಸಮ್ಮತಿಯಿಲ್ಲ ಎಂದರು.
ಆನ್ ಲೈನ್ ಶಿಕ್ಷಣ ಪಡೆದುಕೊಳ್ಳಲು ರಾಜ್ಯದಲ್ಲಿ ಪರದಾಡುವ ಪರಿಸ್ಥಿತಿಯೂ ನಮ್ಮ ಗಮನಕ್ಕೆ ಬಂದಿದೆ. ಅದಕ್ಕೆ ಪೂರಕವಾದ ವಾತಾವರಣವೂ ಬೇಕಾಗುತ್ತದೆ. ಈ ಸಂಬಂಧ ಆನ್ ಲೈನ್ ಶಿಕ್ಷಣ ಸಂಬಂಧ ನಿಮಾನ್ಸ್ ಗೆ ಪತ್ರ ಬರೆಯಲಾಗಿತ್ತು. ನಿಮಾನ್ಸ್ ಸುದೀರ್ಘ ಪತ್ರ ಬರೆದಿದೆ. ನಿಮಾನ್ಸ್ ಪತ್ರ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರೋನಾದಿಂದ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಶಿಕ್ಷಣ ಇಲಾಖೆಯ ಟೈಂ ಟೇಬಲ್ ಎಲ್ಲವೂ ಏರುಪೇರಾಗಿದೆ. ಕೊರೋನಾದಿಂದಉದ್ಭವಿಸಿರೋ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಈ ಸಂಬಂಧ ಕೇಂದ್ರ ಸರ್ಕಾರವೂ ಮಾರ್ಗಸೂಚಿ ಕಳಿಸಬಹುದು. ಕೇಂದ್ರದ ಮಾರ್ಗಸೂಚಿಗಾಗಿ ಎದುರು ನೋಡುತ್ತಿದ್ದೇವೆ. ಶಾಲೆ ಪುನರಾರಂಭಿಸುವ ಕುರಿತಾಗಿ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಒಟ್ಟು 8,48,203 ಮಕ್ಕಳು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು. ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗುವುದು. ಮಕ್ಕಳ ಸುರಕ್ಷತೆ ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮೊದಲ ಆದ್ಯತೆ. ಪರೀಕ್ಷಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಪರೀಕ್ಷೆ ಬರೆಯಲಿರೋ ಮಕ್ಕಳಿಗೆ ಜೂನ್ 10 ರಿಂದ 20 ರವರೆಗೆ ಪುನರ್ ಮನನ ಕಾರ್ಯಕ್ರಮ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.