✍mkm ಕಾಮಿಲ್ ಸಖಾಫಿ ಕೊಡಂಗಾಯಿ
ಎಲ್ಲವೂ ಅಂದುಕೊಂಡಂತೆ ಆಗಿದ್ದಲ್ಲಿ ಈಗಾಗಲೇ ಶಾಲಾ ಮತ್ತು ಮದ್ರಸ ತರಗತಿಗಳು ಆರಂಭವಾಗುತ್ತಿದ್ದುವು. ಇಂದಿನ ಮಕ್ಕಳೇ ಮುಂದಿನ ಜನಾಂಗವೆಂಬುವುದು ಬಹಳ ಹಿಂದಿನಿಂದಲೇ ಕೇಳಿದ ಮಾತಾಗಿದೆ. ಈ ಮಾತಿನ ಸಾಕ್ಷಾತ್ಕಾರಕ್ಕಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಲು ಪ್ರತೀ ಪೋಷಕರು ಬಯಸುತ್ತಾರೆ.ಅದಕ್ಕಾಗಿ ಸರ್ವ ತ್ಯಾಗಕ್ಕೂ ರೆಡಿಯಾಗುತ್ತಾರೆ. ಕಡುಬಡತನದಲ್ಲಿ ಬದುಕುತ್ತಿದ್ದರೂ ಮಕ್ಕಳನ್ನು ಉನ್ನತ ಮಟ್ಟಕ್ಕೇರಿಸಲು ಆಂಗ್ಲ ಮಾಧ್ಯಮಗಳನ್ನೇ ಆಯ್ಕೆ ಮಾಡುವ ಬಹಳಷ್ಟು ರಕ್ಷಕ, ಪೋಷಕರಿದ್ದಾರೆ. ಅಂದರೆ ಅವರೆಲ್ಲರೂ ಮಕ್ಕಳ ಅಭಿವೃದ್ಧಿ, ಉನ್ನತಿಯನ್ನು ಬಯಸುತ್ತಿದ್ದಾರೆ.! ಅಲ್ಲದೆ ಸಂಪತ್ತನ್ನು ಪೋಲು ಮಾಡುವುದಲ್ಲ.!!
ಕೊರೋನಾ ತಂದ ವಿಪತ್ತು
ಕಳೆದ ಎರಡು ಮೂರು ತಿಂಗಳ ಹಿಂದೆ ಚೀನಾದ ವುಹಾನ್ ನಿಂದ ಹರಡಿದ ನೋವೆಲ್ ಕೊರೋನಾ ಎಂಬ ಮಹಾ ವೈರಸ್ ನಿಂದಾಗಿ ಇಡೀ ಭೂಮಿಯೇ ತತ್ತರಿಸಿತು, ಬಳಲಿ ಬೆಂಡಾಯಿತು. ದೇಶ-ವಿದೇಶಗಳಲ್ಲಾಗಿ ಈಗಾಗಲೇ ನಾಲ್ಕು ಲಕ್ಷ ಜನರು ಇದಕ್ಕೆ ಬಲಿಯಾಗಿದ್ದಾರೆ. ಸುಮಾರು 70 ಲಕ್ಷ ಜನರು ತಮ್ಮ ಆರೋಗ್ಯವನ್ನು ಕಳೆದುಕೊಂಡಿದ್ದಾರೆ. ಮಿಲಿಯನ್ ಗಟ್ಟಲೆ ರೂಪಾಯಿಗಳು ನಾಶವಾಗಿದೆ. ಉನ್ನತ ಹುದ್ದೆಯಲ್ಲಿದ್ದ ಬಹಳಷ್ಟು ಜನರು ಕೂಡ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ವೈರಸ್ ಕಾರಣ ನಿರುದ್ಯೋಗಿಗಳಾದವರ ಸಂಖ್ಯೆಯೇ ಅಧಿಕವಾಗಿದೆ. ತಿಂಗಳು ಮೂರು ದಾಟಿದರು ಈ ವ್ಯಾಧಿಯು ತನ್ನ ವೇಗಕ್ಕೆ ಶಕ್ತಿಯನ್ನು ಇನ್ನಷ್ಟು ಅಳವಡಿಸಿಕೊಂಡಿದೆ. ನಮ್ಮ ದೇಶದಲ್ಲಿಯೂ ತೀವ್ರವಾಗಿ ಅದು ಮುಂದುವರಿಯುತ್ತಿದೆ. ಪ್ರತಿದಿನವೂ ಅದರ ಹಸ್ತಕ್ಕೆ ಸಿಲುಕುವವರ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ಆದುದರಿಂದ ನಮ್ಮ ಶಿಕ್ಷಣ ಸಂಸ್ಥೆಗಳು ಸಹಃ ಮುಚ್ಚಲ್ಪಟ್ಟಿದೆ. ವಿದ್ಯಾರ್ಥಿಗಳ ಬಾಳು ಬೆಳಗಿಸುವ ವಿದ್ಯಾಭ್ಯಾಸ ಕೇಂದ್ರಗಳು ಲಾಕ್ ಡೌನ್ ಆಗಿದೆ. ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಗಳೂ ಇಲ್ಲವಾಗಿದೆ.
ಆನ್ಲೈನ್ ನಿಂದ ಮಾತ್ರ ಪರಿಹಾರ
ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಶಿಕ್ಷಣವನ್ನು ನೀಡಿ ಬೆಳೆಸಿ ಉನ್ನತ ಮಟ್ಟಕ್ಕೇರಿಸುವ ಜವಾಬ್ದಾರಿಯನ್ನು ಶಿಕ್ಷಣ ಮಂಡಳಿಯು ವಹಿಸಿಕೊಂಡಿದೆ. ಸರ್ಕಾರಿ ಮತ್ತು ಖಾಸಗಿ ಪಾಳೆಯಗಳಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಿಂದ ನಮ್ಮ ದೇಶದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೆಳಗುತ್ತಿದ್ದಾರೆ. ಶಿಕ್ಷಣಕ್ಕಾಗಿ ನಮ್ಮ ದೇಶವು ಕೋಟಿಗಟ್ಟಲೆ ಹಣಗಳನ್ನು ವ್ಯಯಿಸುತ್ತಿದೆ. ಆದರೆ ಕೋವಿಡ್-19 ಕಾರಣ ಹಿಂದಿನಂತೆ ಶಾಲಾ-ಮದ್ರಸಗಳಲ್ಲಿ ಸೇರಿಸಿ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲವೆಂದು ಎಲ್ಲರಿಗೂ ಗೊತ್ತಿದೆ. ಇನ್ನು ಒಂದು ವೇಳೆ ಸರ್ಕಾರ ವ್ಯವಸ್ಥೆ ಮಾಡಿದರೂ ರಕ್ಷಕರು ಕಳುಹಿಸಿ ಕೊಡಲು ಮುಂದೆ ಬರುವುದಿಲ್ಲ. ಶಿಕ್ಷಣವಿಲ್ಲದೆ ಮಕ್ಕಳ ಸಮಯಗಳು ವ್ಯರ್ಥವಾಗಿ ಮುಗಿಯುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮುತ್ಸದ್ಧಿಗಳು, ಚಿಂತಕರು ಸೇರಿ ಕಂಡುಕೊಂಡ ತಾತ್ಕಾಲಿಕವಾದ ಪರಿಹಾರವಾಗಿದೆ ಆನ್ಲೈನ್ ತರಗತಿ. ಅಂದರೆ ಇದೊಂದು ಶಾಶ್ವತ ಪರಿಹಾರವಲ್ಲ. ಆದರೂ ಮಕ್ಕಳ ಸಮಯ ಸುಮ್ಮನೆ ಪೋಲಾಗುವುದನ್ನು ತಡೆಗಟ್ಟಲು ಕಂಡುಕೊಂಡ ಒಂದು ಸೀಮಿತ ಅವಧಿಯ ಪರಿಹಾರ ಮಾತ್ರ.
ಶಿಕ್ಷಣ ತಜ್ಞರೇ ಹೇಳುವಂತೆ ಇದರಿಂದ ಕೇವಲ 40 ಶೇಕಡ ಮಾತ್ರ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ. ಅಂದರೆ 100 ಶೇಕಡಾ ಪರಿಹಾರ ಸಿಗಲು ಬಯಸುವ ನಮಗೆ ಇಲ್ಲಿ ಸಿಗುವುದು ಕೇವಲ 40 ಶೇಕಡಾ ಮಾತ್ರ. ಅಷ್ಟು ಮಕ್ಕಳಿಗಾದರೂ ಇದರ ಉಪಯೋಗ ಸಿಗುತ್ತಿರುವುದು ಸ್ವಲ್ಪಮಟ್ಟಿನ ನೆಮ್ಮದಿಯಾಗಿದೆ.
ನೆಟ್‌ವರ್ಕ್ ಮತ್ತು ಸಮಸ್ಯೆಗಳು
ನಾವಿಂದು 4 ಜೀ ಯುಗವನ್ನು ದಾಟಿ ಮುಂದಕ್ಕೆ ಹೋಗುತ್ತಿದ್ದೇವೆ. ಸರಕಾರಿ ಮತ್ತು ಖಾಸಗಿ ಒಡೆತನದ ಕಂಪೆನಿಗಳು ಗ್ರಾಹಕರನ್ನು ತಮ್ಮ ಕಡೆ ಸೆಳೆಯುವ ನಿಟ್ಟಿನಲ್ಲಿ 5 ಜೀಯತ್ತ ದಾಪುಗಾಲಿಟ್ಟಿದೆ. ನಗರಗಳನ್ನು ದಾಟಿ ಹಳ್ಳಿಗಳಲ್ಲೂ ಇದೀಗ 4ಜಿ ನೆಟ್‌ವರ್ಕ್ ಸುಲಭವಾಗಿ ಕೈಗೆಟಕ್ಕುತ್ತದೆ. ಅಂದಾಜು ಕೇವಲ 15 ಶೇಕಡ ಮಾತ್ರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸ್ಲೋ ಸಮಸ್ಯೆ ಇರಬಹುದು.! ಆದರೂ ಸಿಗುವುದಿಲ್ಲವೆಂಬ ಸಮಸ್ಯೆಯನ್ನು ಹೇಳುವ ಪ್ರದೇಶಗಳು ಕೇವಲ ಒಂದೋ ಎರಡೋ ಇರಬಹುದು. ಹಾಗಾದರೆ ಉಳಿದ ಅಷ್ಟೂ ಶೇಕಡಾ ಜನರಿಗೆ ಯಾವುದೇ ಸಮಸ್ಯೆ ಇಲ್ಲದೆ ಸಾಮಾಜಿಕ ಜಾಲತಾಣಗಳ ಉಪಯೋಗದಿಂದ ವಿದ್ಯಾಭ್ಯಾಸವನ್ನು ಕಲಿಯಲು ಸಾಧ್ಯವಾಗುವುದಾದರೆ ಅದನ್ನು ನಾವು ಯಾಕೆ ಪ್ರೋತ್ಸಾಹಿಸಬಾರದು.?
ಸ್ಮಾರ್ಟ್ ಫೋನ್ ಗಳಂತಹ ದುಬಾರಿ ಫೋನ್ ಗಳು ಎಲ್ಲಾ ಮನೆಗಳಲ್ಲಿಯೂ ಇಲ್ಲವೆಂಬುದು ಕೆಲವರ ಸಮಸ್ಯೆಯಾಗಿದೆ. ಆದರೆ ಇವತ್ತು ಹೆಚ್ಚಿನ ಮನೆಗಳಲ್ಲಿಯೂ ಸ್ಮಾರ್ಟ್ ಮೊಬೈಲ್ ನ ಉಪಯೋಗ ಹೆಚ್ಚಿನ ರೀತಿಯಲ್ಲಿ ಕಾಣಲಾಗುತ್ತದೆ. ಅದರಲ್ಲೂ ಮಹಿಳೆಯರು ಒಪ್ಪೊತ್ತಿನ ಊಟಕ್ಕೆ ಗತಿ ಇಲ್ಲದಿದ್ದರೂ ಕೈಯಲ್ಲಿ ಹಿಡಿಯುವ ಫೋನ್ ದುಬಾರಿಯಾಗಿರುತ್ತದೆ. ಅಷ್ಟರ ಮಟ್ಟಿಗೆ ಸ್ಮಾರ್ಟ್ ಫೋನ್ ಉಪಯೋಗವು ನಮ್ಮೆಡೆಯಲ್ಲಿ ವ್ಯಾಪಕವಾಗಿದೆ.!!
ಕೊನೆಗೊಳಿಸುವುದಕ್ಕಿಂತ ಮುಂಚೆ
ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುವುದನ್ನು ಪರಿಹರಿಸಲು ಆರಂಭಿಸುವ ಆನ್ಲೈನ್ ತರಗತಿಯನ್ನು ತಡೆಹಿಡಿಯಲು ಕಾರಣಗಳನ್ನು ಕಂಡುಹಿಡಿದು ಸುಸ್ತಾಗುವುದರಿಂದ ಎಲ್ಲರೂ ಹಿಂದೆ ಸರಿಯಬೇಕು. ಲಾಕ್ಡೌನ್ ಕಾಲದಲ್ಲಿ ಹಲವೆಡೆ ನಡೆಸಿದ ಆನ್ಲೈನ್ ತರಗತಿಗಳು ನಡೆಸಲಾಗಿತ್ತು. ಫಲಿತಾಂಶಗಳು ಕೆಲವೆಡೆ 70 ಶೇಕಡಾ ಮತ್ತೆ ಹಲವು ಸಂಸ್ಥೆಯಲ್ಲಿ ಅದಕ್ಕಿಂತಲೂ ಅಧಿಕವು ಬಂದಿದ್ದು, ಅವುಗಳೆಲ್ಲವನ್ನು ಮನದಟ್ಟು ಮಾಡಿದ ಚಿಂತಕರ ಚಾವಡಿಯಿಂದ ಈ ತನಕ ಯಾವುದೇ ವಿರೋಧಗಳು ಬಂದಿಲ್ಲದಿರುವುದು ಗಮನಾರ್ಹವಾಗಿದೆ. ಈಗೀಗ ಸೋಶಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ವಿಡಿಯೋ, ಆಡಿಯೋ ಗಳಿಂದ ಹತ್ತು ಹಲವು ಉಪಕಾರಗಳನ್ನು ಯುವಜನತೆಯು ಪಡೆಯುತ್ತಿದೆ. ಒಂದು ವೇಳೆ ಪುಟ್ಟ ಮಕ್ಕಳಿಗೆ ಆನ್ಲೈನ್ ತರಗತಿಗಳಿಂದ ಹೆಚ್ಚಿನ ಉಪಕಾರ ಸಿಗದಿದ್ದರೂ ದೊಡ್ಡ ತರಗತಿಗಳ ಮಕ್ಕಳಿಗೆ ಖಂಡಿತವಾಗಿಯೂ ವರದಾನವಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ ಮಕ್ಕಳ ಕಲಿಕೆಗಾಗಿ ಆನ್ಲೈನ್ ತರಗತಿಗಳು ನಡೆಯಲಿ. ದಿನದ ಕೆಲವು ತಾಸುಗಳನ್ನು ಮಕ್ಕಳಿಗೆ ಕಲಿಸಲು ಸ್ಮಾರ್ಟ್ ಫೋನ್ ಉಪಯೋಗ ಮಾಡಿಸಬೇಕಾಗುತ್ತದೆ. ಈ ವಿಷಯದಲ್ಲಿ ರಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದು ವಿದ್ಯಾಭ್ಯಾಸ ಮಂಡಳಿ ಮತ್ತು ಶಿಕ್ಷಕರೊಂದಿಗೆ ಕೈಜೋಡಿಸಬೇಕು. ಹಾಗಾದಲ್ಲಿ ಈ ಶ್ರಮವು ಯಶಸ್ವಿಯಾದಿತು. ವಿಜಯವಾಗಲಿ ಎಂದು ಹರಸೋಣ. ಹಾರೈಸೋಣ..!!