ವಿಶ್ವಸಂಸ್ಥೆ: ಅಮೆರಿಕನ್ ಪೊಲೀಸರ ಕಸ್ಟಡಿಯಲ್ಲಿ ಆಫ್ರಿಕಾ ಮೂಲದ ಜಾರ್ಜ್ ಫ್ಲಾಯ್ಡ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಇದೀಗ ಅಮೆರಿಕಾದ್ಯಂತ ತೀವ್ರ ಪ್ರತಿಭಟನೆಗಳ ಕಿಚ್ಚಿಗೆ ಕಾರಣವಾಗಿದೆ. ವಿಶ್ವಾದ್ಯಂತ ಹಲವು ಕಡೆಗಳಿಂದ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅಮೆರಿಕದ ಎಲ್ಲಾ ಕಡೆಯಲ್ಲೂ ಪ್ರತಿಭಟನೆ ಆಗುತ್ತಿದ್ದು ಕೆಲವೆಡೆ ಹಿಂಸಾಚಾರಗಳಿಗೂ ಎಡೆ ಮಾಡಿಕೊಟ್ಟಿದೆ. ಈ ವೇಳೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ವಿಶ್ವ ಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗ್ಯುಟೆರೆಸ್ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.
ಪೊಲೀಸರು ಕೂಡ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಬಲಪ್ರಯೋಗ ಮಾಡಿದ್ಧಾರೆ. ಅನೇಕ ಕಡೆ ಟಿಯರ್ ಗ್ಯಾಸ್ ಪ್ರಯೋಗ ಮಾಡಿದ್ದಾರೆ. ವಿಶ್ವಸಂಸ್ಥೆ ಮುಖ್ಯಸ್ಥರು ಪೊಲೀಸರಿಗೂ ಸಂಯಮ ತೋರುವಂತೆ ತಿಳಿಹೇಳಿದ್ಧಾರೆ.
ಕೆನಡಾ ಗಡಿಭಾಗದಲ್ಲಿರುವ ಅಮೆರಿಕದ ಮಿನ್ನೆಸೋಟಾ ರಾಜ್ಯದ ಮಿನ್ನಿಯಾಪೊಲಿಸ್ ನಗರದಲ್ಲಿ ಕಳೆದ ವಾರ 46 ವರ್ಷದ ಆಫ್ರಿಕನ್ ಮೂಲದ ಜಾರ್ಜ್ ಫ್ಲಾಯ್ಡ್ ಅವರನ್ನು ಬಂಧಿಸಿದ್ದರು. ಈ ವೇಳೆ, ಆತ ಮೃತಪಟ್ಟ. ಅದಾದ ಬೆನ್ನಲ್ಲೇ ಮಾಧ್ಯಮಗಳಲ್ಲಿ ವಿಡಿಯೋವೊಂದು ಸಂಚಲನ ಸೃಷ್ಟಿಸಿತು. ಜಾರ್ಜ್ ಫ್ಲಾಯ್ಡ್ ಅವರನ್ನ ಕೆಳಗೆ ಬೀಳಿಸಿ ಆತನ ಕುತ್ತಿಗೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ಕಾಲಿನಿಂದ ಅದುಮುತ್ತಿದ್ದರು. ಫ್ಲಾಯ್ಡ್ ಉಸಿರಾಡಲು ಕಷ್ಟಪಡುತ್ತಿದ್ದುದು ಈ ವಿಡಿಯೋದಿಂದ ಕಂಡುಬಂದಿತ್ತು. ಫ್ಲಾಯ್ಡ್ ಅದೇ ಕಾರಣಕ್ಕೆ ಸತ್ತರೆನ್ನಲಾಗಿದೆ. ನನಗೆ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಸಾಯುವ ಮುನ್ನ ಫ್ಲಾಯ್ಡ್ ಆಡಿದ ಕೊನೆಯ ಮಾತಾಗಿತ್ತು.
ಇದೀಗ ಫ್ಲಾಯ್ಡ್ ಅವರ ಆ ಅಂತಿಮ ನುಡಿಯೇ ಪ್ರತಿಭಟನಾಕಾರರಿಗೆ ಆಯುಧವಾಗಿದೆ. “I Can’t Breathe” ಫಲಕ ಹಿಡಿದುಕೊಂಡು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಫ್ಲಾಯ್ಡ್ ಅವರನ್ನ ಕೊಂದು ಅಮಾನವೀಯವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ಧಾರೆ.
ಅಮೆರಿಕಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಐದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 48 ರಾಜ್ಯಗಳ ಪೈಕಿ 40 ರಾಜ್ಯಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.