janadhvani

Kannada Online News Paper

ಜೂ.25ರಿಂದ ಎಸ್​ಎಸ್​ಎಲ್​​ಸಿ ಪರೀಕ್ಷೆ-ಜುಲೈ ಅಂತ್ಯಕ್ಕೆ ಫಲಿತಾಂಶ

ಮೈಸೂರು: ಜೂನ್ 25ರಿಂದ ಜುಲೈ 4ರ ವರೆಗೆ ಎಸ್​ಎಸ್​ಎಲ್​​ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡು ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಲಾಗುವುದು ಇದಕ್ಕೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಂದೆ ಬಂದಿದೆ ಎಂದರು.

ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹಾಯವಾಣಿ ಕೇಂದ್ರ ತೆರೆಯಲಾಗುವುದು. ಪ್ರತಿ ಬೆಂಚ್​​ಗಳ ನಡುವೆ ಸಾಮಾಜಿಕ ಅಂತರ ಇರಲಿದೆ. ಕಂಟೈನ್​ಮೆಂಟ್​ ಜೋನ್​ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ, ಈಗ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಜುಲೈನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅವರನ್ನು ಫ್ರೆಶ್ ಕ್ಯಾಂಡಿಡೇಟ್ ಎಂದೇ ಪರಿಗಣಿಸಲಾಗುವುದು ಎಂದು ಹೇಳಿದರು.

ಸದ್ಯಕ್ಕೆ ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಕಂಟೈನ್​ಮೆಂಟ್​ ಜೋನ್ ಇಲ್ಲ. ಚಂದನವಾಹಿನಿ ಮೂಲಕ ಪುನರ್ ಮನನ ತರಗತಿ. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜುಗೊಳಿಸಲಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಮಕ್ಕಳು ಆತ್ಮ ವಿಶ್ವಾಸ ಈ ಎರಡು ಸೂತ್ರಗಳ ಮೂಲಕ ಪರೀಕ್ಷೆ ಬರೆಯುವಂತೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.

ಮುಂಬರುವ ಶೈಕ್ಷಣಿಕ ವರ್ಷವನ್ನು ಯಾವಾಗ ಆರಂಭಿಸಬೇಕು. ಪಠ್ಯ ಕ್ರಮ ಯಾವ ರೀತಿ ಇರಬೇಕು ಇದನ್ನ ಮುಂದಿನ ವಾರ ನಿರ್ಧಾರ ಮಾಡುತ್ತೇವೆ. 2020 ಕೊರೊನಾ ವರ್ಷವಾಗಿದ್ದು, ವಿಭಿನ್ನ ವರ್ಷವಾಗಿದೆ. ಪರಿಣಾಮ ಎಲ್ಲಾ ವರ್ಗಗಳು ಜರ್ಝರಿತವಾಗಿವೆ. ಹಾಗಾಗಿ ಯಾವುದೇ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಳ ಮಾಡಬಾರದು. ಮಾನವೀಯ ದೃಷ್ಟಿಯಿಂದ ನೋಡಬೇಕು. ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳ ಮಾಡಲು ಬಿಡುವುದಿಲ್ಲ. ಶಿಕ್ಷಣ ವ್ಯವಸ್ಥೆಯ ಮೇಲೆ ಕೊರೊನಾ ಭಾರೀ ಪರಿಣಾಮ ಬೀರಿದೆ ಎಂದಿದ್ದಾರೆ.

ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭವಾಗಿದ್ದು, ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಬರುವ ಸಾಧ್ಯತೆಯಿದೆ. ಜುಲೈ ಅಂತ್ಯಕ್ಕೆ ಎಸ್​ಎಸ್​ಎಲ್​ಸಿ ಫಲಿತಾಂಶ ಬರಲಿದೆ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನುಡಿದರು.