janadhvani

Kannada Online News Paper

ಬಡವರಿಗೆ ತಲಾ 10 ಸಾವಿರ ರೂಪಾಯಿ- ಕಾಂಗ್ರೆಸ್ ಅಭಿಯಾನ ಆರಂಭ

ನವದೆಹಲಿ: ಕೊರೊನಾ ಮತ್ತು ಲಾಕ್​ಡೌನ್ ಸಂಕಷ್ಟ ಶುರುವಾದಾಗಿನಿಂದಲೂ ನಿರಂತರವಾಗಿ ಬಡವರಿಗೆ ಹಣ ನೀಡಿ ಅವರನ್ನು ಸದ್ಯದ ಕಡುಕಷ್ಟದ ಪರಿಸ್ಥಿತಿಯಿಂದ ಕಾಪಾಡಿ ಎಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಈಗ ಸ್ವತಃ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ.

ಮುಖ್ಯವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಕೈಯಲ್ಲಿ ಹಣ ಇಲ್ಲದೆ ಕಷ್ಟಕ್ಕೆ ಸಿಲುಕಿರುವ ಬಡವರಿಗೆ ಹಣ ಮತ್ತು ಆಹಾರ ನೀಡಿ ಎಂದು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಡಾ. ರಘುರಾಮ್ ರಾಜನ್ ಮತ್ತು ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರ ಜೊತೆ ಚರ್ಚೆ ನಡೆಸಿದ್ದಾರೆ.

ರಘುರಾಮ್ ರಾಜನ್ ಮತ್ತು ಅಭಿಜಿತ್ ಬ್ಯಾನರ್ಜಿ ಕೂಡ ಕೂಡಲೇ ಕೇಂದ್ರ ಸರ್ಕಾರ ಹಸಿವಿನಿಂದ ಸಾಯುತ್ತಿರುವ ಬಡವರಿಗೆ ಹಣ ಮತ್ತು ಆಹಾರ ನೀಡಬೇಕೆಂದು, ಕೇಂದ್ರ ಸರ್ಕಾರದಲ್ಲಿ ಹಣ ಮತ್ತು ಆಹಾರಕ್ಕೆ ಕೊರತೆ ಇಲ್ಲವೆಂದು ಹೇಳಿದ್ದರು. ಆದರೂ ಕೇಂದ್ರ ಸರ್ಕಾರ ಗಣನೀಯವಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಸ್ವತಃ ಕಾಂಗ್ರೆಸ್ ಪಕ್ಷವೇ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ.

ಇಂದಿನಿಂದ ದೇಶಾದ್ಯಂತ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ರೂಪಾಯಿ ಹಣ ನೀಡುವ ಅಭಿಯಾನವನ್ನು ಆರಂಭಿಸುತ್ತಿದ್ದು ಆನ್ ಲೈನ್ ಮೂಲಕ ಬಡವರಿಗೆ ಹಣ ಹಾಕಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ಮೂಲಕ ಮೊದಲು ತಾನು ಬಡವರ ಖಾತೆಗಳಿಗೆ ಹಣ ಹಾಕಿ, ಅದಾದ ಮೇಲೆ ಕೇಂದ್ರ ಸರಕಾರವನ್ನೂ ಬಡವರಿಗೆ ಹಣ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಲಿದೆ‌.

ವಲಸೆ ಕಾರ್ಮಿಕರ ರೈಲು ಪ್ರಯಾಣ ವೆಚ್ಛ ಭರಿಸುವ ವಿಷಯದಲ್ಲೂ‌ ಕಾಂಗ್ರೆಸ್ ಇದೇ ಹಾದಿ ಹಿಡಿದಿತ್ತು. ಕಾಂಗ್ರೆಸ್ ಹಣ ಹಾಕಲು ಮುಂದೆ ಬಂದಿದ್ದೇ ತಡ ರೈಲ್ವೆ ಇಲಾಖೆ ಶೇಕಡಾ 75ರಷ್ಟು ಮತ್ತು ರಾಜ್ಯ ಸರ್ಕಾರ ಶೇಕಡಾ 25ರಷ್ಟು ಭರಿಸಿ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವ ನಿರ್ಧಾರಕ್ಕೆ ಬರಲಾಗಿತ್ತು. ಕರ್ನಾಟಕದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ‌‌.ಕೆ. ಶಿವಕುಮಾರ್, ‘ತಾನೇ ಚೆಕ್ ಕೊಡುತ್ತೇನೆ, ಮೊದಲು ವಲಸೆ ಕಾರ್ಮಿಕರನ್ನು ಅವರವ ಊರಿಗೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದ್ದರು. ಇದರಿಂದ ವಿಚಿಲಿತವಾಗಿದ್ದ ಕರ್ನಾಟಕ ಸರ್ಕಾರ ಬಳಿಕ ತಾನೇ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿತ್ತು.

ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಸ್ವತಃ ಒಂದು ಸಾವಿರ ಬಸ್ ಕಳುಹಿಸಿಕೊಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳುವ ಕೆಲಸವನ್ನು ಚುರುಕುಗೊಳಿಸಿತು. ಇದೇ ರೀತಿ ಈಗ ಬಡವರಿಗೂ ಪಕ್ಷದಿಂದ ಹಣ ಹಾಕಿ ಬಳಿಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ.

error: Content is protected !! Not allowed copy content from janadhvani.com