ಮಂಗಳೂರು: ಲಾಕ್‌ಡೌನ್‌ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದಲ್ಲಿರುವ ಕಠಿಣ ಸನ್ನಿವೇಶದಲ್ಲಿ ಸರ್ಕಾರ ಜನರ ನೆರವಿಗೆ ಧಾವಿಸಿದರೂ ಗ್ರಾಹಕಸ್ನೇಹಿ ಆಗಬೇಕಿದ್ದ ಮೆಸ್ಕಾಂ ಜನರಿಗೆ ವಿದ್ಯುತ್ ಬಿಲ್ ನೆಪದಲ್ಲಿ ಬರೆ ಹಾಕುತ್ತಿದೆ’ ಎಂದು ಹಲವಾರು ಗ್ರಾಹಕರು ದೂರಿದ್ದಾರೆ.
ವಿದ್ಯುತ್ ಬಿಲ್ ಅನ್ನು ಒಂದು ತಿಂಗಳು ಪಾವತಿಸದಿದ್ದರೂ ದಂಡ ವಿಧಿಸದಂತೆ ಸೂಚಿಸಿ, ವಿನಾಯಿತಿ ನೀಡಿದೆ. ಆದರೆ, ಗ್ರಾಹಕರಿಗೆ ಈಗ ಎರಡು ತಿಂಗಳ ಬಿಲ್ ನೀಡುವ ಜತೆಗೆ ವಿಪರೀತ ಬಳಕೆಯ ಲೆಕ್ಕಹಾಕಿ, ಮಾಮೂಲಿಗಿಂತ ಮೂರ್ನಾಲ್ಕು ಪಟ್ಟು ಬಿಲ್ ನೀಡುತ್ತಿರುವುದು ತಲೆನೋವು ತಂದಿದೆ.
‘ಮೆಸ್ಕಾಂ ಎಲ್ಲೆಡೆ ಡಿಜಿಟಲ್ ಮೀಟರ್ ಅಳವಡಿಸಿದ್ದು, ಇದರಲ್ಲಿ ಲೆಕ್ಕಾಚಾರ ತಪ್ಪುವಂತೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಯಾರು ಎಷ್ಟು ವಿದ್ಯುತ್ ಬಳಸಬೇಕು ಎಂದು ಕಂಪನಿ ನಿಗದಿ ಮಾಡಲು ಅವಕಾಶವಿಲ್ಲ. ಹಾಗಿದ್ದರೂ ಹೆಚ್ಚುವರಿ ಬಿಲ್ ನೀಡಿದರೆ ಜನಸಾಮಾನ್ಯರು ಯಾರನ್ನು ಕೇಳಬೇಕು? ಈ ಪ್ರಶ್ನೆಗಳಿಗೆ ಮೆಸ್ಕಾಂ ಕಚೇರಿಯಲ್ಲೇ ಉತ್ತರವಿಲ್ಲ’ ಎನ್ನುವುದು ಗ್ರಾಹಕರ ದೂರು.
‘ಹಲವರು ಈಗಾಗಲೇ ಬಿಲ್‌ನಷ್ಟೇ ಹಣ ಪಾವತಿಸಿದ್ದಾರೆ. ಈ ಬಗ್ಗೆ ಅವರು ಯಾರನ್ನೂ ವಿಚಾರಿಸಲು ಇಲ್ಲ. ತಿಂಗಳ ಬಿಲ್ 200 ರಿಂದ 300 ಬರುತ್ತಿದ್ದವರಿಗೆ ಸಾವಿರಾರು ರೂಪಾಯಿ ಬಂದರೆ ಹೇಗೆ? ಇದು ಕಂಪನಿಗೆ ಲಾಭ ಮಾಡಿಕೊಳ್ಳುವ ಸಮಯವೇ? ಬಳಕೆದಾರರ ಸಂಕಷ್ಟಕ್ಕೆ ಸ್ಪಂದಿಸಿ ನೆರವು ನೀಡಬೇಕಾದ ಸಂಸ್ಥೆ ಗ್ರಾಹಕರ ಅರಿವಿಗೆ ಬಾರದೆ ಹೆಚ್ಚುವರಿ ಮೊತ್ತ ವಸೂಲು ಮಾಡಲು ಮುಂದಾದರೆ ಇದು ಮೋಸವಲ್ಲದೆ ಮತ್ತೇನು?’ ಎನ್ನುವುದು ಗ್ರಾಹಕರ ಅಭಿಪ್ರಾಯ.
‘ನಮ್ಮ ಮನೆಯಲ್ಲಿ ಮೀಟರ್ ಬೋರ್ಡ್ ಹೊರಭಾಗದಲ್ಲಿಯೇ ಇದೆ. ಹೆಚ್ಚುವರಿ ಬಿಲ್ ಬಂದ ಸಂದರ್ಭದಲ್ಲಿ ಕಚೇರಿಗೆ ಹೋಗಿ ಪಟ್ಟಿ ತೆಗೆಸಿದರೆ ಹಲವು ಬಾರಿ ಮನೆಬಾಗಿಲು ಹಾಕಿದೆ ಎಂದು ತೋರಿಸಲಾಗಿದೆ. ತಿಂಗಳುಗಟ್ಟಲೆ ಮನೆ ಬಿಟ್ಟು ಎಲ್ಲಿ ಹೋಗುವುದು? ನಾವು ಪ್ರತಿ ತಿಂಗಳೂ ಬಿಲ್ ಪಾವತಿಸಿದ್ದೇವೆ. ಆದರೆ ₹ 3ಸಾವಿರ ಬಾಕಿ ಇರುವಂತೆ ಬಿಲ್‌ನಲ್ಲಿ ಕಾಣಿಸಲಾಗಿದೆ. ಹೀಗಾದರೆ ಜನಸಾಮಾನ್ಯರು ಬದುಕುವುದು ಹೇಗೆ?’ ಎನ್ನುವುದು ಇನ್ನೋರ್ವ ಗ್ರಾಹಕರ ಪ್ರಶ್ನೆ.