ಮಂಗಳೂರು : ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆ ಸ್ಥಳಾಂತರಗೊಳಿಸಿದ ಬೆನ್ನಿಗೆ ಇಂದು ಅಲ್ಲಿನ ಅತಂತ್ರ ವ್ಯವಸ್ಥೆ ಹೊರಬಿದ್ದಿದೆ.
ಕೋವಿಡ್ 19 ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಈಗಿರುವ ಮಾರುಕಟ್ಟೆಯ ವಿನ್ಯಾಸ ಮತ್ತು ರಚನೆ ಸೂಕ್ತವಾಗಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ತರಾತುರಿಯಲ್ಲಿ ಬೈಕಂಪಾಡಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ವ್ಯಾಪಾರಿಗಳು ತೊಂದರೆ ಆಗದ ರೀತಿಯಲ್ಲಿ ಬೈಕಂಪಾಡಿ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಮತ್ತು ಪಾಲಿಕೆ ಭರವಸೆ ನೀಡಿತ್ತು.
ಆದ್ರೆ ಇದೀಗ ಅಲ್ಲಿಗೆ ಸ್ಥಳಾಂತರ ಮಾಡಿಸಿದ್ರೂ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದ, ಶಾಸಕರು ಹಾಗೆಯೇ ಮಹಾನಗರ ಪಾಲಿಕೆ ಕೊಟ್ಟ ಭರವಸೆ ಇಂದು ಮೊದಲ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿದೆ.ಹೌದು ಬೈಕಂಪಾಡಿಯಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ಪ್ರಾರಂಭಿಸಿದ್ರೂ, ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ. ಅಲ್ಲದೆ ಎಪಿಎಂಸಿನಲ್ಲಿ ಶೌಚಾಲಯ, ದಾಸ್ತಾನು ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ವ್ಯಾಪಾರಿಗಳು ಮನವಿಯನ್ನೂ ಮಾಡಿದ್ದರು. ಅದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿದ್ದರು. ಆದ್ರೆ ಅದೆಲ್ಲವೂ ಭರವಸೆಯಾಗೇ ಉಳಿದಿದೆ.
ಇಂದು ಸುರಿದ ಭಾರೀ ಮಳೆಗೆ ತರಕಾರಿಗಳೆಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಸಂಕಷ್ಟದಲ್ಲಿ ಜೀವನ ಸಾಗಿಸುವ ವ್ಯಾಪಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳ ಮಹಾನಗರ ಪಾಲಿಕೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಇದಕ್ಕೊಂದು ಸೂಕ್ತ ಸೌಲಭ್ಯ ಒದಗಿಸಬೇಕೆಂದು ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ರವರು ಒತ್ತಾಯಿಸಿದ್ದಾರೆ.