janadhvani

Kannada Online News Paper

ಯುಎಇ: ವಲಸಿಗರು ತವರಿಗೆ- 1 ವಾರದಲ್ಲೇ 2ಲಕ್ಷ ಮಂದಿ ನೋಂದಣೆ

ನವದೆಹಲಿ: ವಿದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮೇ 7ರಿಂದ ಇವರನ್ನು ಹಂತ ಹಂತವಾಗಿ ಕರೆತರಲು ವ್ಯವಸ್ಥೆ ಮಾಡಿದೆ. ಈ ನಿಟ್ಟಿನಲ್ಲಿ ಭಾರತ ಹಿಂದಿರುಗಲಿಚ್ಛಿಸುವ ಜನರ ಹೆಸರನ್ನು ನೊಂದಾಯಿಸಲು ವಿವಿಧ ದೇಶಗಳ ಭಾರತೀಯ ರಾಯಭಾರಿ ಕಚೇರಿಗಳಿಗೆ ಸೂಚಿಸಲಾಗಿದೆ.

ಭಾರತಕ್ಕೆ ಬರಲಿಚ್ಛಿಸಿರುವ ಜನರ ಸಂಖ್ಯೆ ಕಂಡು ಸರ್ಕಾರವೇ ಗಾಬರಿಗೊಂಡಿದೆ. ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ದೇಶವೊಂದರಿಂದಲೇ 2 ಲಕ್ಷ ಜನರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ಧಾರೆ. ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳೇ ಈ ಮಾಹಿತಿ ನೀಡಿದ್ಧಾರೆ.

ಕಳೆದ ವಾರವಷ್ಟೇ ವೆಬ್ಸೈಟ್ನಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದೆಷ್ಟು ಸಂಖ್ಯೆಯಲ್ಲಿ ಜನರು ಮುಗಿಬಿದ್ದರೋ, ವೆಬ್ಸೈಟೇ ಕ್ರ್ಯಾಷ್ ಆಗಿ ಹೋಗಿತ್ತು. ಇದು ಮೊದಲ ಹಂತದ ನೊಂದಣಿಯಷ್ಟೇ ಆಗಿದೆ.

ಹೆಸರು ನೊಂದಾಯಿಸಲು, ಅಥವಾ ಈಗಾಗಲೇ ನೊಂದಾಯಿಸಿದವರು ರಾಯಭಾರ ಕಚೇರಿಗೆ ಬರಬೇಡಿ. ಎಲ್ಲರಿಗೂ ಮರಳುವ ಅವಕಾಶ ಕಲ್ಪಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕಚೇರಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೇ 7ರಂದು ಯುಎಯಿಂದ ಎರಡು ವಿಮಾನಗಳು ಭಾರತಕ್ಕೆ ಬರಲಿವೆ. ಅಬುಧಾಬಿಯಿಂದ ಕೊಚ್ಚಿಗೆ ಒಂದು; ದುಬೈನಿಂದ ಕೋಝಿಕ್ಕೋಡ್ ಗೆ ಮತ್ತೊಂದು ಫ್ಲೈಟ್ ಬರುತ್ತವೆ. ಆದರೆ, ವಿಮಾನ ಹತ್ತುವ ಮುನ್ನ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಕೋವಿಡ್ ರೋಗ ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣದ ಅವಕಾಶ ಇರುತ್ತದೆ. ಇವರು ಭಾರತಕ್ಕೆ ಬಂದ ನಂತರ, ಅಂದರೆ ಕೇರಳಕ್ಕೆ ಬಂದ ನಂತರ ಪ್ರತಿಯೊಬ್ಬರೂ ಕ್ವಾರಂಟೈನ್ಗೆ ಒಳಪಡಬೇಕು. ಕೇರಳ ಸರ್ಕಾರವೇ ಕ್ವಾರಂಟೈನ್ಗೆ ವ್ಯವಸ್ಥೆ ಮಾಡುತ್ತದಾದರೂ ವೆಚ್ಚವೆಲ್ಲವನ್ನೂ ಪ್ರಯಾಣಿಕರೇ ಭರಿಸಬೇಕು ಎಂದು ಸೂಚಿಸಲಾಗಿದೆ.

ಭಾರತ ಸರ್ಕಾರ ಈ ಕ್ರಮ ಕೈಗೊಳ್ಳಲು ಯುಎಇ ಸರ್ಕಾರದ ಒತ್ತಡವೂ ಒಂದು ಕಾರಣವಾಗಿದೆ. ತಮ್ಮಲ್ಲಿರುವ ವಿದೇಶೀಯರೆಲ್ಲರನ್ನೂ ಆಯಾ ದೇಶದವರು ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಅಂಥ ರಾಷ್ಟ್ರಗಳ ಜನರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶ ನೀಡುವುದಿಲ್ಲ ಎಂದು ಯುಎಇ ಎಚ್ಚರಿಕೆ ನೀಡಿತ್ತು. ಅಂತೆಯೇ ಭಾರತ ತನ್ನ ಪ್ರಜೆಗಳನ್ನ ಅಲ್ಲಿಂದ ವಾಪಸ್ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದೆ.

ಮಾಲ್ಡೀವ್ಸ್ನಿಂದಲೂ ಭಾರತೀಯ ಪ್ರಜೆಗಳನ್ನ ಹಡಗಿನ ಮೂಲಕ ಕರೆಸಿಕೊಳ್ಳಲಾಗುತ್ತಿದೆ. ಕುವೈತ್ ದೇಶ ಕೂಡ ಅಕ್ರಮವಾಗಿ ನೆಲಸಿರುವ ಭಾರತೀಯ ವಲಸಿಗರನ್ನು ಮರಳಿಸಲು ಒತ್ತಡ ಹಾಕುತ್ತಿದೆ. ಇವರನ್ನು ಉಚಿತವಾಗಿ ಭಾರತಕ್ಕೆ ಕಳುಹಿಸಿಕೊಡುವುದಾಗಿ ಕುವೈತ್ ಹೇಳುತ್ತಿದೆ.

error: Content is protected !! Not allowed copy content from janadhvani.com