janadhvani

Kannada Online News Paper

ಕೊನೆಗೂ ಬಾಗಿಲು ತೆರೆದ ಕೇಂದ್ರ: ಮೇ.7ರಿಂದ ವಿದೇಶದಲ್ಲಿರುವ ಭಾರತೀಯರು ತವರಿಗೆ

ನವದೆಹಲಿ: ಕೊರೋನಾ ವೈರಸ್ನಿಂದಾಗಿ ವಿಶ್ವದೆಲ್ಲೆಡೆ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ, ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿರುವ ಲಕ್ಷಾಂತರ ಭಾರತೀಯರು ತವರಿಗೆ ಮರಳಲು ತವಕಿಸುತ್ತಿದ್ಧಾರೆ.

ಭಾರತ ಸರ್ಕಾರ ಈಗ ಅವರಿಗೆಲ್ಲಾ ಬಾಗಿಲು ತೆರೆದಿದೆ. ಮೇ 7ರಿಂದ ಅವರನ್ನೆಲ್ಲಾ ಹಂತ ಹಂತವಾಗಿ ಕರೆತರಲು ಯೋಜನೆ ಹಾಕಿದೆ. ಅದಕ್ಕಾಗಿ ವಿಶೇಷ ವಿಮಾನಗಳು ಮತ್ತು ಹಡಗುಗಳನ್ನು ನಿಯೋಜಿಸಲಾಗಿದೆ.

ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ವಿದೇಶೀಯರೆಲ್ಲರನ್ನೂ ರಕ್ಷಿಸಲು ಅಮೆರಿಕ ಸೇರಿದಂತೆ ಹಲವು ದೇಶಗಳು ವೈಮಾನಿಕ ತೆರವು ಕಾರ್ಯಾಚರಣೆ ನಡೆಸಿದ್ದವು. ಆ ಬಳಿಕ ಭಾರತ ಈಗ ನಡೆಸುತ್ತಿರುವ ತೆರವು ಕಾರ್ಯಾಚರಣೆ ಅತಿ ದೊಡ್ಡದೆನಿಸಿದೆ. ಲಕ್ಷಾಂತರ ಜನರು ಭಾರತಕ್ಕೆ ವಾಪಸ್ ಬರುವ ನಿರೀಕ್ಷೆ ಇದೆ.

ಸೋಂಕು ವ್ಯಾಪಿಸುವ ಅಪಾಯ ಇರುವುದರಿಂದ ಯಾವ ರೀತಿಯಲ್ಲಿ ಕರೆ ತರಬೇಕೆಂದು ಕಾರ್ಯಾಚರಣೆಯ ಮಾದರಿ(SOP) ರೂಪಿಸಲಾಗಿದೆ. ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತಕ್ಕೆ ಮರಳಬಯಸುವ ವ್ಯಕ್ತಿಗಳ ಪಟ್ಟಿ ತಯಾರಿಸುತ್ತಿವೆ.

ವಿಮಾನ ಹತ್ತುವ ಮುನ್ನ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಯಲಿದೆ. ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣದ ಅವಕಾಶ ಇರಲಿದೆ. ಆರೋಗ್ಯ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ರೂಪಿಸಿರುವ ಆರೋಗ್ಯ ನಿಯಮಾವಳಿಗಳನ್ನು ಪ್ರತಿಯೊಬ್ಬ ಪ್ರಯಾಣಿಕರೂ ಪಾಲನೆ ಮಾಡುವುದು ಕಡ್ಡಾಯ. ಹಾಗೆಯೇ ವೈಮಾನಿಕ ಪ್ರಯಾಣ ಉಚಿತವಿರುವುದಿಲ್ಲ.

ಭಾರತಕ್ಕೆ ಮರಳಿದ ಬಳಿಕ ಎಲ್ಲರೂ ಆರೋಗ್ಯ ಸೇತು ಆ್ಯಪ್ನಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳಬೇಕು. ಇಲ್ಲಿಯೂ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಆ ನಂತರ ಅವರಿರುವ ರಾಜ್ಯದಲ್ಲಿ ಅವರನ್ನೆಲ್ಲಾ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿಡಲಾಗುತ್ತದೆ. ಈ 14 ದಿನಗಳ ನಂತರ ಕೊರೋನಾ ಪರೀಕ್ಷೆ ನಡೆಸಿ ಆ ಬಳಿಕ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.

ವಿದೇಶಗಳಿಂದ ಬರುವ ಭಾರತೀಯರ ಪರೀಕ್ಷೆ, ಕ್ವಾರಂಟೈನ್ ಇತ್ಯಾದಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳೇ ಮಾಡಬೇಕೆಂದು ಸೂಚಿಸಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಸದ್ಯದಲ್ಲೇ ಎಲ್ಲಾ ವಿವರಗಳನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

error: Content is protected !! Not allowed copy content from janadhvani.com