ನವದೆಹಲಿ: ಕೊಲ್ಲಿಯಲ್ಲಿರುವ ವಲಸಿಗರನ್ನು ವಾಪಸ್ ಕರೆತರಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ. ವಲಸಿಗರನ್ನು ಮರಳಿ ತರಲು ತಯಾರಿ ನಡೆಸುವಂತೆ ವಿದೇಶಾಂಗ ಸಚಿವಾಲಯವು ಏರ್ ಇಂಡಿಯಾ ಮತ್ತು ಭಾರತೀಯ ನೌಕಾಪಡೆಗೆ ಸೂಚನೆ ನೀಡಿದೆ. ಗಲ್ಫ್ ರಾಜ್ಯಗಳಲ್ಲಿ ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ಕೇಂದ್ರವು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯ, ಕತಾರ್, ಬಹ್ರೇನ್, ಓಮನ್, ಕುವೈತ್ ಮುಂತಾದ ಕಡೆ ಸಿಲುಕಿರುವ ಸಾವಿರಾರು ಭಾರತೀಯರನ್ನು ವಾಪಾಸ್ ಕರೆತರಲು ಸರ್ಕಾರ ಚಿಂತಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ವಿವಿಧ ಕೊಲ್ಲಿ ದೇಶಗಳಲ್ಲಿನ ರಾಯಭಾರ ಕಚೇರಿಗಳು ಸಾಮಾಜಿಕ ಮಾಧ್ಯಮ ಮತ್ತು ಇ-ಮೇಲ್ ಮೂಲಕ ಹಲವಾರು ದೂರುಗಳನ್ನು ಸ್ವೀಕರಿಸಿದ್ದು, ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಾದ ಹಿನ್ನೆಲೆಯಲ್ಲಿ ವಾಪಸಾತಿಗಾಗಿ ಒತ್ತಾಯಿಸಲಾಗಿದೆ. ಕೇರಳ ಈಗಾಗಲೇ ವಲಸಿಗರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು.
ಈ ಹಿನ್ನೆಲೆಯಲ್ಲಿಯೇ ಕೇಂದ್ರವು ಕ್ರಮಕ್ಕೆ ಚಾಲನೆ ನೀಡಿದ್ದು, ಕೊಲ್ಲಿಯಲ್ಲಿರುವವರನ್ನು ಕರೆತರುವ ಉದ್ದೇಶದಿಂದ ವಿಮಾನ ಮತ್ತು ಹಡಗುಗಳನ್ನು ತಯಾರುಗೊಳಿಸಲು ಕೇಂದ್ರ ವಿದೇಶಾಂಗ ಸಚಿವಾಲಯವು ಏರ್ ಇಂಡಿಯಾ ಮತ್ತು ಭಾರತೀಯ ನೌಕಾಪಡೆಗೆ ಕರೆ ನೀಡಿದೆ.
ಇದಕ್ಕಾಗಿ ಐಎನ್ಎಸ್ ಜಲಾಶ್ವ ಹಡಗನ್ನು ಕಳುಹಿಸಲು ನಿರ್ಧರಿಸಲಾಗಿದೆ. ಇದು ಭಾರತೀಯ ನೌಕಾ ಸೇನೆಯ ಎರಡನೇ ಅತಿ ದೊಡ್ಡ ಹಡಗಾಗಿದ್ದು, ಒಂದೇ ಬಾರಿಗೆ 500 ಜನರನ್ನು ಕರೆತರುವ ಸಾಮರ್ಥ್ಯ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರದ ಅಧಿಕಾರಿಗಳು, ಗಲ್ಫ್ ರಾಷ್ಟ್ರಗಳಲ್ಲಿ ಲಾಕ್ಡೌನ್ನಿಂದಾಗಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಹಲವರಿಗೆ ಅಲ್ಲಿ ಉದ್ಯೋಗವಿಲ್ಲ, ವೀಸಾ ಕೂಡ ಮುಗಿದಿದೆ. ಅವರನ್ನು ಕರೆತರಲು ನೌಕಾಸೇನೆ ಹಲವು ಟ್ರಿಪ್ಗಳನ್ನು ಮಾಡಬೇಕಾಗುತ್ತದೆ. ಹಡಗಿನಲ್ಲಿ ಒಂದು ಬಾರಿಗೆ 500 ಜನರನ್ನು ಕರೆತರಲು ಅವಕಾಶವಿದೆ. ಆದರೆ, ಕೊರೋನಾದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಮುಖ್ಯವಾದ್ದರಿಂದ ಅಷ್ಟು ಪ್ರಮಾಣದ ಜನರನ್ನು ಒಟ್ಟಿಗೇ ಕರೆತರಲು ಸಾಧ್ಯವಿಲ್ಲ ಎಂದಿದ್ದಾರೆ.
ಏರ್ ಇಂಡಿಯಾ 500 ವಿಮಾನಗಳನ್ನು ಇದಕ್ಕಾಗಿ ಸಜ್ಜುಗೊಳಿಸಿದೆ ಎಂದು ಕೇಂದ್ರಕ್ಕೆ ಈಗಾಗಲೇ ತಿಳಿಸಿದೆ. ಹಿಂದಿರುಗುವವರನ್ನು ಕಾರಂಟೈನ್ ನಲ್ಲಿರಿಸುವ ಕುರಿತ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೇಂದ್ರ ಸರ್ಕಾರ ಸಮಾಲೋಚಿಸುತ್ತಿದೆ.
ಏತನ್ಮಧ್ಯೆ, ಮರಳಿ ತರುವಲ್ಲಿ ಯಾರಿಗೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಕೇಂದ್ರವು ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆ ಮುಂದುವರೆದಿದೆ ಎಂದು ವರದಿಯಾಗಿದೆ.
ಯುಎಸ್ ಮತ್ತು ಯುರೋಪಿಯನ್ ದೇಶಗಳ ವಲಸಿಗರನ್ನು ಕೂಡ ಭಾರತಕ್ಕೆ ಕರೆತರುವ ಬೇಡಿಕೆಯೂ ಕೇಳಿಬಂದಿದೆ. ವಿಶೇಷ ವಿಮಾನಗಳ ಮೂಲಕ ಅಥವಾ ಸೇವೆಗಳನ್ನು ಸ್ಥಗಿತಗೊಳಿಸಿರುವ ವಿಮಾನಗಳಿಗೆ ಅನುಮತಿ ನೀಡಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎನ್ನಲಾಗಿದೆ. ಪ್ರಯಾಣಿಕರು ವಿಮಾನ ಶುಲ್ಕವನ್ನು ಪಾವತಿಸ ಬೇಕಾಗಬಹುದು. ಲಕ್ಷಾಂತರ ಜನರು ಮರಳುವ ಹಿನ್ನೆಲೆಯಲ್ಲಿ ಉಚಿತ ಪ್ರಯಾಣ ಪ್ರಾಯೋಗಿಕವಲ್ಲ ಎಂದು ಸರಕಾರಿ ಮೂಲಗಳು ಹೇಳುತ್ತವೆ.
ಕರ್ನಾಟಕ ಸಜ್ಜು
ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಗಳಿಂದ ತವರಿಗೆ ಮರಳುತ್ತಿರುವ 10,823 ಮಂದಿ ಅನಿವಾಸಿ ಕನ್ನಡಿಗರ ನಿರ್ವಹಣೆಗೆ ರಾಜ್ಯ ಸರಕಾರ ತಯಾರಿ ನಡೆಸಿದೆ.
”ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಕರೆಸಲು ಕೇಂದ್ರ ಸರಕಾರ ಕ್ರಿಯಾಯೋಜನೆ ರೂಪಿಸಿದೆ,” ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
”ವಿದೇಶಗಳಲ್ಲಿರುವ 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,784 ವಲಸಿಗರು ಹಾಗೂ ವೃತ್ತಿಪರರು ರಾಜ್ಯಕ್ಕೆ ಮರಳುತ್ತಿದ್ದಾರೆ. ಈ ಪೈಕಿ ಮೊದಲ ಹಂತದಲ್ಲಿ 6100 ಮಂದಿ ಶೀಘ್ರ ಆಗಮಿಸಲಿದ್ದಾರೆ. ಈ ಎಲ್ಲರನ್ಬೂ ಎ, ಬಿ, ಸಿ ಎಂದು ವರ್ಗೀಕರಿಸಿ ತಪಾಸಣೆ, ಚಿಕಿತ್ಸೆ ಮತ್ತು ಕ್ವಾರಂಟೈನ್ ಗೆ ಒಳಪಡಿಸುವ ಪ್ರಕ್ರಿಯೆಗೆ ತಯಾರಿ ಮಾಡಲಾಗುತ್ತಿದೆ,” ಎಂದು ತಿಳಿಸಿದರು.
ಕೇರಳ ಸರ್ಕಾರ ಎಲ್ಲವನ್ನೂ ಸಜ್ಜುಗೊಳಿಸಿದೆ
ಕೋವಿಡ್ ಹರಡುವುದನ್ನು ತಡೆಯಲು ಮತ್ತು ವಲಸಿಗರನ್ನು ಕೊರೆಂಟೈನ್ ಮಾಡಲು ಕೇರಳ ಸರಕಾರ ಅವಕಾಶ ಕಲ್ಪಿಸಲು ಸಿದ್ಧವಾಗಿದೆ.
500,000 ವಲಸಿಗರನ್ನು ಕೊರೆಂಟೈನ್ ಮಾಡಲು ರಾಜ್ಯವು ವ್ಯವಸ್ಥೆಯನ್ನು ಹೊಂದಿದೆ ಎಂದು ಕೇರಳದ ಸಚಿವ ಕೆ.ಟಿ.ಜಲೀಲ್ ಹೇಳಿದರು.
ಕೇರಳದಲ್ಲಿ ಸಂಪರ್ಕತಡೆಗಾಗಿ 2,39,642 ಹಾಸಿಗೆಗಳ ಜಾಗವನ್ನು ಸರಕಾರ ಕಂಡುಹಿಡಿದಿದೆ. ತಿರುವನಂತಪುರಂ ಯೂನಿವರ್ಸಿಟಿ ಸ್ಟೇಡಿಯಂ, ಚಂದ್ರಶೇಖರನ್ ನಾಯರ್ ಸ್ಟೇಡಿಯಂ, ಎರ್ನಾಕುಲಂನ ಜವಾಹರಲಾಲ್ ನೆಹರು ಕ್ರೀಡಾಂಗಣ ಮತ್ತು ಕೋಝಿಕೋಡ್‌ನ ಮೆಡಿಕಲ್ ಕಾಲೇಜ್ ಸ್ಟೇಡಿಯಂ ಸಹ ಕೇರಳ ಸರಕಾರದ ಪಟ್ಟಿಯಲ್ಲಿ ಸೇರಿವೆ.
ಗಲ್ಫ್ ರಾಷ್ಟ್ರಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸವಾಗಿದ್ದಾರೆ. ಅವರಲ್ಲಿ ಬಹುತೇಕ ವೀಸಾ ಅವಧಿ ಮುಗಿದಿದ್ದು, ಇನ್ನು ಕೆಲವರು ಟೂರಿಸ್ಟ್ ವೀಸಾದಲ್ಲಿ ಹೋದವರಿದ್ದಾರೆ. ಮತ್ತೆ ಕೆಲವರ ಕೆಲಸದ ಅವಧಿಯೂ ಪೂರ್ಣಗೊಂಡಿದೆ. ಅಂತಹ ಅನಿವಾರ್ಯತೆಯಲ್ಲಿ ಇರುವವರನ್ನು ಮತ್ತು ಭಾರತಕ್ಕೆ ವಾಪಾಸ್ ಬರಲು ಆಸಕ್ತಿ ಹೊಂದಿದವರನ್ನು ಲಾಕ್ಡೌನ್ ಬಳಿಕ ವಾಪಾಸ್ ಕರೆತರಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಗಲ್ಫ್ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.