ಬೆಂಗಳೂರು: ರಾಜ್ಯದಲ್ಲಿ ಮೇ. 15ರವರೆಗೆ ಲಾಕ್‌ಡೌನ್ ಮುಂದುವರಿಸಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣ ಮತ್ತು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ಕುರಿತು ಇಂದು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದರು. ಈ ಚರ್ಚೆಯಲ್ಲಿ ಕರ್ನಾಟಕದ ಸಿಎಂ ಯಡಿಯೂರ್‍ಪಪ ಸಹ ಭಾಗವಹಿಸಿದ್ದರು. ವಿಡಿಯೋ ಕಾನ್ಫರೆನ್ಸ್ ನಂತರ ಮಾಹಿತಿ ನೀಡಿರುವ ಬಿಎಸ್‌ವೈ,
“ಸೋಂಕು ಹರಡದಂತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಅದನ್ನು ಮುಂದುವರಿಸುತ್ತೇವೆ. ಹೀಗಾಗಿ ಮೇ.03ರ ನಂತರವೂ ಎರಡು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮೇ.15ರ ವರೆಗೂ ಲಾಕ್‌ಡೌನ್ ಇರಲಿದೆ.ಆದರೆ, ವಲಯವಾರು ಲಾಕ್‌ಡೌನ್‌ಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದ ಹಸಿರು ವಲಯದ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭ ಆಗಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಮೇ 16 ವರೆಗೆ ಲಾಕ್‌ಡೌನ್ ವಿಸ್ತರಣೆಗೆ ಅವಕಾಶ ನೀಡಬೇಕು ಎಂದು ಮೇಘಾಲಯ ಮತ್ತು ಮಿಜೋರಾಂ ಮುಖ್ಯಂತ್ರಿಗಳು ಮನವಿ ಮಾಡಿದ್ದಾರೆ. ಹಂತಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡುತ್ತೇವೆ ಎಂದು ಉತ್ತರಾಖಂಡ ಮುಖ್ಯಮಂತ್ರಿಯವರು ಪ್ರಧಾನಿಗೆ ತಿಳಿಸಿದ್ದಾರೆ.
ಆದ್ಯತೆ ಮೇರೆಗೆ ಹಂತಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆಗಿನ ಸಭೆಯಲ್ಲಿ ಪ್ರಧಾನಿಯವರು ದೀರ್ಘ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಮತ್ತು ಸಹಕಾರವನ್ನು ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಕಡಿಮೆ ಇರುವುದು ನಿಜ. ಆದರೂ ಲಾಕ್‌ಡೌನ್ ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಕೈಗಾರಿಕೆ, ಅಗತ್ಯವಸ್ತುಗಳ ವ್ಯಾಪಾರ ವಹಿವಾಟು ಮತ್ತು ಇತರ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿದ್ದೇವೆ. ಕೊರೊನಾ ವಿರುದ್ಧ ನಡೆಯುತ್ತಿರುವುದು ಸುದೀರ್ಘ ಹೋರಾಟ. ಹಂತಹಂತವಾಗಿ ಲಾಕ್‌ಡೌನ್ ತೆರವು ಮಾಡಬೇಕಿದೆ ಎಂದೂ ಅಮಿತ್ ಶಾ ಹೇಳಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿಲ್ಲ. ಕೇರಳ ಸರ್ಕಾರವು ತನ್ನ ಸಲಹೆಗಳನ್ನು ಕೇಂದ್ರಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಿದೆ. ಕೇರಳ ಮುಖ್ಯ ಕಾರ್ಯದರ್ಶಿ ಕಾನ್ಫರನ್ಸ್‌ನಲ್ಲಿ ಭಾಗವಹಿಸಿದ್ದಾರೆ.
ಕೋವಿಡ್–19 ಪಿಡುಗು ವಿರುದ್ಧ ಹೋರಾಟ ಆರಂಭಗೊಂಡ ನಂತರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸುತ್ತಿರುವ ಮೂರನೇ ವಿಡಿಯೊ ಕಾನ್ಫರೆನ್ಸ್ ಇದಾಗಿದೆ. ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸುವ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಏಪ್ರಿಲ್ 11ರಂದು ಪ್ರಧಾನಿಯವರು ಎಲ್ಲ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದರು. ಆಗ, ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು.
ಮೇ.3ರ ನಂತರ ಎಷ್ಟು ದಿನಗಳ ಲಾಕ್ ಮುಂದುವರಿಯುತ್ತೆ ಎಂಬುದನ್ನು ಕೇಂದ್ರ ಸರಕಾರ ಘೋಷಣೆ ಮಾಡಬೇಕಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಮೇ.3ರ ನಂತರವೇ ಪ್ರಧಾನಿ ಮೋದಿ ಘೋಷಣೆ ಮಾಡಲಿದ್ದಾರೆ.