ರಿಯಾದ್: ರಮಝಾನ್ ಮತ್ತಿತರ ಸಮಯಗಳಲ್ಲಿ ಸಹಾಯ ನೀಡುವಾಗ ಫಲಾನುಭವಿಗಳ ಚಿತ್ರಗಳನ್ನು ತೆಗೆಯುವುದು ಮತ್ತು ಪ್ರಕಟಿಸುವುದನ್ನು ಮಾನವ ಸಂಪನ್ಮೂಲ ಸಚಿವಾಲಯ ನಿಷೇಧಿಸಿದೆ. ವ್ಯಕ್ತಿಗಳ ಗೌಪ್ಯತೆಯನ್ನು ಗೌರವಿಸುವ ಸಲುವಾಗಿ ಸಚಿವಾಲಯ ಈ ಕ್ರಮ ತೆಗೆದುಕೊಂಡಿದೆ.
ವಿವಿಧ ಸೇವಾ ಸಂಘಟನೆಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳು ಜನರಿಗೆ ಸಹಾಯವನ್ನು ಹಸ್ತಾಂತರಿಸುವ ಚಿತ್ರವನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಆದರೆ ರಮಝಾನ್ ಸಮಯದಲ್ಲಿ, ನೆರವು ವಿತರಣೆಗಾಗಿ ತಯಾರಿ ನಡೆಸುವ ದೃಶ್ಯಗಳನ್ನು ತೆಗೆಯಲು ಮತ್ತು ಪ್ರಕಟಿಸಲು ಯಾವುದೇ ಅಡ್ಡಿಯಿಲ್ಲ. ಇತರರಿಗೆ ಸ್ಫೂರ್ತಿ ನೀಡುವಂತಹ ತುಣುಕನ್ನು ನೀವು ತೆಗೆಯಬಹುದು ಮತ್ತು ಬಿಡುಗಡೆ ಮಾಡಬಹುದು. ಆದರೆ ಅದರಲ್ಲಿ ಯಾವುದೇ ಫಲಾನುಭವಿಯ ಚಿತ್ರ ಇರಬಾರದು. ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ವರದಿಗಳು ಮತ್ತು ಕರಪತ್ರಗಳಲ್ಲಿ ಸಹಾಯ ಪಡೆಯುವ ಚಿತ್ರಗಳನ್ನು ಪ್ರಕಟಿಸುವುದನ್ನು ಸಚಿವಾಲಯ ನಿಷೇಧಿಸಿದೆ.
ದೊಡ್ಡ ಮತ್ತು ಸಣ್ಣ ಸಂಸ್ಥೆಗಳು ಸಣ್ಣಮಟ್ಟದ ಸಹಾಯ ನೀಡುವ ಚಿತ್ರಗಳು ಮತ್ತು ದೃಶ್ಯಗಳನ್ನು ಪ್ರಕಟಿಸುತ್ತವೆ. ಸ್ವೀಕರಿಸುವವರು ಅನ್ಯ ದಾರಿಯಿಲ್ಲದೆ ಚಿತ್ರಕ್ಕೆ ಮುಖ ನೀಡಬೇಕಾದ ಸಂದರ್ಭಗಳು ಸಹ ಇರುತ್ತವೆ. ಈ ಪ್ರವೃತ್ತಿಯನ್ನು ಕೊನೆಗೊಳಿಸುವುದರ ಭಾಗವಾಗಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.