janadhvani

Kannada Online News Paper

ಶುಲ್ಕ ಕಟ್ಟುವಂತೆ ಒತ್ತಡ ಹೇರುವ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- ಶಿಕ್ಷಣ ಸಚಿವ

ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮಕ್ಕೆ ಮುಂದಾಗಲು ಆಯುಕ್ತರಿಗೆ ನಿರ್ದೇಶನವನ್ನು ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್‌ 19 ಲಾಕ್‌ಡೌನ್‌ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡಲು ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಮಾಡಿರುವ ಮನವಿಯನ್ನು ಸುರೇಶ್ ಕುಮಾರ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ ಯಾವ ಪೋಷಕರು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಶಿಕ್ಷಣ ಕಾಯ್ದೆಯ ಅವಕಾಶಗಳಡಿಯಲ್ಲಿ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳು ಕ್ರಮ ವಹಿಸಲು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್‌ ಕುಮಾರ್‌ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಯಾವ ಪೋಷಕರು, ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮಕ್ಕೆ ಮುಂದಾಗಲು ಸಚಿವರು ಆಯುಕ್ತರಿಗೆ ನಿರ್ದೇಶನವನ್ನು ನೀಡಿದ್ದಾರೆ.

ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು ಎಂಬ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸಚಿವ ಸುರೇಶ್‌ ಕುಮಾರ್‌ ನೀಡಿದ್ದಾರೆ.

error: Content is protected !! Not allowed copy content from janadhvani.com