ರಿಯಾದ್: ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ ಕಾರಣ ಸ್ವದೇಶಕ್ಕೆ ಮರಳಲು ಸಾಧ್ಯವಾಗದವರಿಗೆ ವಿಮಾನ ವ್ಯವಸ್ಥೆಯನ್ನು ಗೃಹ ಸಚಿವಾಲಯವು ಆಯೋಜಿಸಿದೆ.
ಆದರೆ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಕ್ಕೆ ಅನುಮತಿಯಿಲ್ಲದ ಕಾರಣ ಅಬ್ಶೀರ್ ಪೋರ್ಟಲ್ ನಲ್ಲಿ ಭಾರತೀಯರ ನೋಂದಣೆಯನ್ನು ತಡೆಹಿಡಿಯಲಾಗಿತ್ತು.ಇದೀಗ ಅದನ್ನು ಲಭ್ಯಗೊಳಿಸಲಾಗಿದೆ.
ಪ್ರಸ್ತುತ ಉದ್ಯೋಗ ಒಪ್ಪಂದ ಮುಗಿದು ಎಕ್ಸಿಟ್ ಪಡೆದವರು ಮತ್ತು ಎಕ್ಸಿಟ್ ರೀ ಎಂಟ್ರಿ ವೀಸಾಗಳನ್ನು ಪಡೆದವರಿಗೂ ಗೃಹ ಸಚಿವಾಲಯದ ಆನ್‌ಲೈನ್ ವೆಬ್‌ಸೈಟ್ “ಅಬ್ಶೀರ್” ನಲ್ಲಿ “ಅವ್ದ” ಎಂಬ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ. ಈ ವ್ಯವಸ್ಥೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ.
ಅಬ್ಶೀರ್ ತೆರೆದ ಬಳಿಕ ‘ಅವ್ದ’ ಬಟನ್ ಕ್ಲಿಕ್ ಮಾಡಿ ಯಾತ್ರೆ ಕೈಗೊಳ್ಳಲು ಬಯಸುವ ವ್ಯಕ್ತಿಯ ಇಖಾಮಾ ಸಂಖ್ಯೆ, ಜನನ ದಿನಾಂಕ, ಮೊಬೈಲ್ ಸಂಖ್ಯೆ, ನಿರ್ಗಮನ ವಿಮಾನ ನಿಲ್ದಾಣ ಮತ್ತು ಸ್ವದೇಶದ ವಿಮಾನ ನಿಲ್ದಾಣ ಮುಂತಾದ ವಿವರಣೆ ನೀಡಬೇಕು. ಅಬ್ಶೀರ್ ಪೋರ್ಟಲ್ ನಲ್ಲಿ ಖಾತೆ ಇಲ್ಲದವರು ಅಬ್ಶೀರ್ ನಲ್ಲಿ ನೋಂದಾವಣೆಗೊಂಡು ಈ ವ್ಯವಸ್ಥೆಯನ್ನು ಬಳಸಬಹುದು.
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅರ್ಜಿಗಳನ್ನು ಸಚಿವಾಲಯ ಪರಿಶೀಲಿಸಿ, ಪ್ರಯಾಣ ಪ್ರಕ್ರಿಯೆ ಆರಂಭಿಸಲಿದೆ. ಅರ್ಜಿಯನ್ನು ಸ್ವೀಕರಿಸಿದ ಕೂಡಲೇ ಪ್ರಯಾಣ ಅಧಿಸೂಚನೆಯನ್ನು ನೀಡಲಾಗುತ್ತದೆ. ನಿರ್ಗಮನ ದಿನಾಂಕ, ಟಿಕೆಟ್ ಸಂಖ್ಯೆ ಮತ್ತು ಬುಕಿಂಗ್ ಮಾಹಿತಿಯನ್ನು ತಿಳಿಸುವ ಸಂದೇಶವು ತಮ್ಮ ಮೊಬೈಲ್‌ಗೆ ಲಭಿಸಲಿದ್ದು, ಪ್ರಯಾಣಕ್ಕೆ ತಯಾರಿ ನಡೆಸಲು ಅನುವು ಮಾಡುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸೌದಿ ದೊರೆ ಸಲ್ಮಾನ್ ಅವರ ವಿಷೇಶ ನಿರ್ದೇಶ ಪ್ರಕಾರ ವಿದೇಶಿಯರನ್ನು ತಮ್ಮ ಸ್ವದೇಶಕ್ಕೆ ಹಿಂದಿರುಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ರಿಯಾದ್‌ನ ಕಿಂಗ್ ಖಾಲಿದ್, ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್, ಮದೀನಾದ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಮತ್ತು ದಮ್ಮಾಮ್ ಕಿಂಗ್ ಫಹದ್ ಮುಂತಾದ ವಿಮಾನ ನಿಲ್ದಾಣಗಳ ಮೂಲಕ ಸ್ವದೇಶಕ್ಕೆ ಮರಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸ್ವದೇಶಕ್ಕೆ ತೆರಳಿದವರು ಸೌದಿ ಅರೇಬಿಯಾಗೆ ಯಾವಾಗ ಮರಳಬಹುದು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ , ಸಂಪೂರ್ಣವಾಗಿ ಕೋವಿಡ್-19 ಸೋಂಕು ಹತೋಟಿಗೆ ಬಂದ ಬಳಿಕವಷ್ಟೇ ವಿದೇಶೀಯರಿಗೆ ಸೌದಿ ಪ್ರವೇಶಕ್ಕೆ ಅನುಮತಿಸುವರು ಎಂದು ಬಲ್ಲವರು ಅಭಿಪ್ರಾಪಟ್ಟಿದ್ದಾರೆ.