janadhvani

Kannada Online News Paper

ಟ್ವಿಟರ್ನಲ್ಲಿ ಅರಬ್ ಮಹಿಳೆಯರ ನಿಂದನೆ- ತೇಜಸ್ವಿ ಸೂರ್ಯ ವಿರುದ್ಧ ವ್ಯಾಪಕ ಆಕ್ರೋಶ

ದುಬೈ: ಸಂಸದ ತೇಜಸ್ವಿ ಸೂರ್ಯ, ಐದು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್, ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಅವರನ್ನು ಸಂಸದ ಸ್ಥಾನದಿಂದ ಕಿತ್ತುಹಾಕಬೇಕೆಂದು ಪ್ರಧಾನಿಯನ್ನು ಒತ್ತಾಯಿಸುತ್ತಿದ್ದಾರೆ.

ಅಷ್ಟಕ್ಕೂ ಏನದು ಟ್ವೀಟ್?: 2015ರಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಶೇಕಡಾ 95ರಷ್ಟು ಅರಬ್ ಮಹಿಳೆಯರು ಕಳೆದ ಕೆಲ ನೂರು ವರ್ಷಗಳಲ್ಲಿ ಲೈಂಗಿಕ ತೃಪ್ತಿ, ಪರಾಕಾಷ್ಠೆಯನ್ನು ಹೊಂದಲಿಲ್ಲ. ಲೈಂಗಿಕ ಕ್ರಿಯೆಗಳಿಂದ ಇಲ್ಲಿನ ತಾಯಂದಿರು ಮಕ್ಕಳನ್ನು ಹೆರುತ್ತಾಳೆಯೇ ಹೊರತು ಪ್ರೀತಿಯಿಂದಲ್ಲ ಎಂದು ಬರೆದಿದ್ದರು.

ಇದು ಅರಬ್ ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಮಾಡಿರುವ ನಿಂದನಾತ್ಮಕ, ಅವಹೇಳನ ಹೇಳಿಕೆ ಎಂದು ಅಲ್ಲಿನ ಉದ್ಯಮ ಮಹಿಳೆ ನೂರಾ ಅಲ್ ಗುರೈರ್ ಟ್ವೀಟ್ ಮಾಡಿ ತೀವ್ರ ಹರಿಹಾಯ್ದರು. “ಭಾರತದಲ್ಲಿ ಮುಸಲ್ಮಾನರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ಇದರಿಂದ ಗೊತ್ತಾಗುತ್ತದೆ. ಇದು ಆ ಸಂಸದನ ಇಸ್ಲಾಮೋಫೋಬಿಯಾ ಮತ್ತು ದುರ್ಬಳಕೆ ಮನೋಭಾವವನ್ನು ತೋರಿಸುತ್ತದೆ. ನಿಮ್ಮನ್ನು ಬೆಳೆಸಿದ ರೀತಿ, ನೀವು ಬೆಳೆದುಬಂದ ರೀತಿ ಬಗ್ಗೆ ಮರುಕವಾಗುತ್ತದೆ, ಭಾರತ ದೇಶದಲ್ಲಿ ಹಲವು ಮಹಿಳಾ ನಾಯಕರಿದ್ದರೂ ಕೂಡ ಮಹಿಳೆಯರಿಗೆ ಗೌರವ ತೋರಿಸುವ ಗುಣ ನಿಮ್ಮಲ್ಲಿ ಬಂದಿಲ್ಲ. ಸರ್ಕಾರ ನಿಮಗೆ ವಿದೇಶಾಂಗ ಖಾತೆ ನೀಡಿದರೆ ಅರಬ್ ದೇಶಕ್ಕೆ ಬರಬೇಡಿ. ನಿಮಗೆ ಇಲ್ಲಿ ಸ್ವಾಗತ ಇಲ್ಲ. ನೆನಪಿಟ್ಟುಕೊಳ್ಳಿ” ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನ್ನು ಯಾರೋ ಗಮನಿಸಿ ಅರಬ್ ದೇಶದ ಅವರ ಅನುಯಾಯಿಗಳು ಮಹಿಳೆ ಅಭಿಪ್ರಾಯವನ್ನು ಬೆಂಬಲಿಸಿ ರಿಟ್ವೀಟ್ ಮಾಡಿ ಸಂಸದ ತೇಜಸ್ವಿ ಸೂರ್ಯಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಕೆಲವರು ಪ್ರಧಾನಿ ಮೋದಿಯನ್ನು ತಮ್ಮ ಟ್ವೀಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.

ಅರಬ್ ಮಹಿಳೆಯರನ್ನು ನಿಮ್ಮ ಸರ್ಕಾರದ ಸಂಸದರೊಬ್ಬರು ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ, ಅವರನ್ನು ಸದಸ್ಯತ್ವದಿಂದ ಉಚ್ಛಾಟಿಸಬಾರದೇಕೆ ಎಂದು ಮತ್ತೊಬ್ಬರು ಕೇಳಿದ್ದಾರೆ.

ಭಾರತದಲ್ಲಿ ಕೂಡ ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರಲ್ಲಿ ಹಲವರು ತೇಜಸ್ವಿ ಸೂರ್ಯ ಟ್ವೀಟ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಂಸದ ತೇಜಸ್ವಿ ಸೂರ್ಯ ಅದನ್ನು ಡಿಲೀಟ್ ಮಾಡಿದ್ದಾರೆ.

error: Content is protected !! Not allowed copy content from janadhvani.com