ದಮ್ಮಾಮ್: ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸೌದಿಯ ಪೂರ್ವ ಪ್ರಾಂತ್ಯದ ಎರಡು ನಗರಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ. ಅಲ್ ಅಹ್ಸಾ ರಾಜ್ಯಪಾಲರ ವ್ಯಾಪ್ತಿಯಲ್ಲಿ ಅಲ್ ಫೈಸಲಿಯಾ ಮತ್ತು ಅಲ್ ಫಾದಿಲಿಯಾ ಪ್ರದೇಶಗಳಲ್ಲಿನ ಕರ್ಫ್ಯೂವನ್ನು ಇಪ್ಪತ್ನಾಲ್ಕು ಗಂಟೆಗಳ ಕಾಲ ವಿಸ್ತರಿಸಲಾಗಿದೆ. ಈ ಪ್ರದೇಶಗಳ ನಿವಾಸಿಗಳಿಗೆ ಹೊರ ಹೋಗಲು ಅನುಮತಿ ಇಲ್ಲ ಮತ್ತು ಹೊರಗಿನವರಿಗೆ ಪ್ರವೇಶಿಸುವ ಅವಕಾಶವೂ ಇಲ್ಲ.
ಆಹಾರ ಮತ್ತು ಔಷಧದಂತಹ ಅಗತ್ಯ ಸೇವೆಗಳಿಗೆ ಮಾತ್ರ ಮನೆ ಬಿಟ್ಟು ಹೊರಗಡೆ ಬರುವ ಅವಕಾಶ ನೀಡಲಾಗಿದೆ. ಈ ಕ್ರಮವು ಕೋವಿಡ್ ನಿಂದ ರಕ್ಷಣೆ ಹೆಚ್ಚಿಸುವ ಗುರಿಯ ಭಾಗವಾಗಿದ್ದು, ಕೋವಿಡ್ ಪ್ರಕರಣಗಳು ವ್ಯಾಪಿಸುವ ಅನುಮಾನದ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ದಮ್ಮಾಂನ ಹಯ್ಯಲ್ ಅತೀರ್ ಪ್ರದೇಶವನ್ನು ಕೂಡ ನಿನ್ನೆ ಸಂಪೂರ್ಣವಾಗಿ ಮುಚ್ಚಲಾಯಿತು. ಐವತ್ತಕ್ಕೂ ಹೆಚ್ಚು ಕೊರೋನಾ ಪ್ರಕರಣ ಕಂಡುಬಂದ ನಂತರ ಈ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, 24 ಗಂಟೆಗಳ ಕರ್ಫ್ಯೂ ಅನ್ನು ಬಿಗಿಗೊಳಿಸಲಾಗಿದೆ.
ಕಾರ್ಮಿಕ ಶಿಬಿರಗಳಲ್ಲಿ ತಪಾಸಣೆ ತೀವ್ರಗೊಂಡ ನಂತರ, ಹೆಚ್ಚಿನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಅವರನ್ನು ಕೋರಂಟೈನ್ ಗೆ ವರ್ಗಾಯಿಸಿ, ಮಾದರಿಗಳನ್ನು ಪರಿಶೀಲಿಸಿದ ನಂತರ ಪಾಸಿಟಿವ್ ಎಂದು ದೃಢಪಟ್ಟವರನ್ನು ಪ್ರತ್ಯೇಕಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ಮೂಲಕ ಸಾಮಾಜಿಕ ಹರಡುವಿಕೆಯನ್ನು ತಡೆಯಲಾಗುತ್ತದೆ.






