janadhvani

Kannada Online News Paper

ಯುಎಇ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ಪರ್ಯಾಯ ವಸತಿ ವ್ಯವಸ್ಥೆ

ಅಬುದಾಬಿ: ಭಾರತೀಯ ವಲಸಿಗರಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್‌–19) ದೃಢಪಟ್ಟರೆ, ಅವರನ್ನು ಪ್ರತ್ಯೇಕವಾಗಿರಿಸುವ ಸಂಬಂಧ ಪರ್ಯಾಯ ವಸತಿ ಕಲ್ಪಿಸಲು ಯುಎಯಿಯಲ್ಲಿನ ಭಾರತದ ರಾಯಭಾರ ಕಚೇರಿ ಮುಂದಾಗಿದೆ.

‘ಸಾಕಷ್ಟು ಸಂಖ್ಯೆಯ ಭಾರತೀಯರು ಇಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ಕೋವಿಡ್‌–19 ಇರುವುದು ದೃಢಪಟ್ಟರೆ, ಸೋಂಕು ಇತರರಿಗೆ ಹರಡುವುದನ್ನು ತಡೆಯುವ ಸಲುವಾಗಿ ಸೋಂಕಿತರಿಗೆ ಪರ್ಯಾಯ ವ್ಯವಸ್ಥೆ ಒದಗಿಸಬೇಕಾಗುತ್ತದೆ. ಈ ಸಂಬಂಧ ಇಲ್ಲಿನ ಆರೋಗ್ಯ ಇಲಾಖೆಯೊಂದಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದು ಭಾರತದ ರಾಯಭಾರಿ ಪವನ್‌ ಕಪೂರ್‌ ಹೇಳಿರುವುದನ್ನು ಉಲ್ಲೇಖಿಸಿ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

‘ಅವಿವಾಹಿತರಲ್ಲಿ ಕೆಲವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರಿಗೆ ಊಟ ಅಥವಾ ಅಡುಗೆ ತಯಾರಿಸಲು ಬೇಕಾದ ಪದಾರ್ಥಗಳಿರುವ ಕಿಟ್‌ಗಳನ್ನು ಪೂರೈಕೆ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಭಾರತ ಸರ್ಕಾರ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಆರಂಭಿಸಿದ ಕೂಡಲೇ ಇಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದೊಯ್ಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದೂ ಅವರು ಹೇಳಿದ್ದಾರೆ.

ನೆರವಿಗೆ ಸಂಪರ್ಕಿಸಿ: ಯುಎಇಯಲ್ಲಿರುವ ಭಾರತೀಯರು ವೈದ್ಯಕೀಯ ನೆರವು ಬೇಕಾದಲ್ಲಿ ಇ–ಮೇಲ್‌ ca.abudhabi@mea.gov.in ಹಾಗೂ ಯಾವುದೇ ತುರ್ತು ಸೇವೆ ಬೇಕಾದಲ್ಲಿ ದೂರವಾಣಿ ಸಂಖ್ಯೆ 0508995583 ಸಂಪರ್ಕಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.