ಮಂಗಳೂರು:-ವಿಶ್ವಾದ್ಯಂತ ಕೊರೋನಾ ವೈರಸ್ ಹಾವಳಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ತತ್ತರಿಸಿ ಇಡೀ ಪ್ರಪಂಚವೇ ಜಾತಿ ಧರ್ಮ, ಪಕ್ಷ, ರಾಜಕೀಯ ಸಿದ್ಧಾಂತವನ್ನು ಮರೆತು ಒಂದಾಗಿ ಹೋರಾಟ ಮಾಡುತ್ತಿದೆ.ಅದೇ ರೀತಿಯಲ್ಲಿ ಗಡಿ ಜಲ ನೆಲ ಎಂಬುದನ್ನು ನೋಡದೇ ಮಾನವೀಯ ದೃಷ್ಟಿಯಿಂದ ಪರಸ್ಪರ ಸಹಕರಿಸುತ್ತಿದೆ,ಇದು ಪ್ರಸ್ತುತ ಸಮಯದಲ್ಲಿ ಅನಿವಾರ್ಯ ಕೂಡ ಹೌದು.
ಮಂಗಳೂರು-ಕಾಸರಗೋಡು ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ ಶಿಕ್ಷಣ, ವ್ಯಾಪಾರ, ವೈದ್ಯಕೀಯ ನೆರವು ಎಲ್ಲಾ ವಿಧದಲ್ಲಿ ಕೂಡ ಪರಸ್ಪರ ಅವಲಂಬನೆಗೆ ಒಳಗಾಗಿರುವಂತಹ ಪ್ರದೇಶಗಳಾಗಿರುತ್ತವೆ.
ಆದರೆ ಕೊರೋನಾ ಕಾರಣಕ್ಕಾಗಿ ಲಾಕ್ ಡೌನ್ ಹೇರಿ ಉಭಯ ಜಿಲ್ಲೆಗಳ ಸಂಪರ್ಕ ಕಡಿತಗೊಳಿಸಿರುವುದು ಸ್ವಾಗತಾರ್ಹವಾಗಿದ್ದರು ತುರ್ತು ವೈದ್ಯಕೀಯ ನೆರವಿಗಾಗಿ ಗಡಿ ತೆರವುಗೊಳಿಸಬೇಕಾದದ್ದು ಕಡ್ಡಾಯವಾಗಿರುತ್ತದೆ.ಮತ್ತು ಇದನ್ನು ವಿರೋಧಿಸುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿರುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವೈದ್ಯಕೀಯ ಚಿಕಿತ್ಸೆಗಾಗಿ ಮಾನವೀಯ ನೆಲೆಯಿಂದ ಗಡಿಯನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದ್ದು ಸ್ವಾಗತಾರ್ಹವಾಗಿದೆ.ಆದರೆ ಇಲ್ಲಿನ ಕೆಲವು ರಾಜಕೀಯ ನಾಯಕರುಗಳು ಇಂತಹ ಸಂದಿಗ್ಧ ಸಮಯದಲ್ಲಿ ಕೂಡ ಇದನ್ನು ವಿರೋಧಿಸಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿರುವುದು ಮಾನವೀಯ ಮೌಲ್ಯಕ್ಕೆ ವಿರುದ್ದವಾದದ್ದು. ಪ್ರಸ್ತುತ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ವೈರಸ್ ಗೆ ಸಂಬಂಧಿಸಿ ಜೀವ ಹಾನಿಯಾಗಿಲ್ಲ ಆದರೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಗಡಿಯನ್ನು ತೆರವುಗೊಳಿಸದ ಕಾರಣದಿಂದ ಹಲವು ರೋಗಿಗಳ ಜೀವ ಹೋಗಿದೆ.
ಇದು ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಭಯ ಜಿಲ್ಲೆಗಳ ಸಂಬಂಧದ ಅಂತರ ಹೆಚ್ಚಾಗಿ ಹಲವಾರು ಸಮಸ್ಯೆಗಳು ಉದ್ಬವವಾಗಬಹುದು. ಪ್ರಮುಖವಾಗಿ ನಗರದ ಆರ್ಥಿಕತೆಗು ಬಹು ದೊಡ್ಡ ಹೊಡೆತ ಉಂಟಾಗುವ ಅಪಾಯವಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡು ಜಿಲ್ಲೆಯಿಂದ ಚಿಕಿತ್ಸೆ ಗಾಗಿ ಬರುವ ರೋಗಿಗಳಿಗೆ ಗಡಿಯನ್ನು ಮುಕ್ತ ಗೊಳಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.






