ನವದೆಹಲಿ,ಏ.13:ಕೋವಿಡ್ -ವಿದೇಶದಲ್ಲಿ ದುಡಿಯುತ್ತಿರುವ ವಲಸಿಗರನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಕೋವಿಡ್ -19 ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಭಾರತೀಯರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ.ಮನವಿಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ.
ಸರ್ಕಾರದ ಕೋವಿಡ್ ವೈರಸ್ ತಡೆಗಟ್ಟುವ ಪ್ರಯತ್ನವನ್ನು ದುರ್ಬಲಗೊಳಿಸಲು ನ್ಯಾಯಾಲಯ ಬಯಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ. ವಲಸಿಗರ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ನಾಲ್ಕು ವಾರಗಳ ನಂತರ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಕೊರೊನಾ ಸೋಂಕು ತಗುಲಿ ವಿಶ್ವದ 183ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿರುವ ಪ್ರಜೆಗಳು ಅನಾರೋಗ್ಯ ಪೀಡಿತರಾಗಿದ್ದಾರೆ. ಈ ರಾಷ್ಟ್ರಗಳಲ್ಲಿ ಅನೇಕ ಭಾರತೀಯರು ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಕರೆಸಿಕೊಳ್ಳುವ ಸಲುವಾಗಿ ಹಲವು ಮಂದಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲವೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಈ ವಿಷಯ ಕುರಿತ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿರುವುದರಿಂದ ಕೊರೊನಾ ಸೋಂಕಿತರ ಕುಟುಂಬಗಳಲ್ಲಿ ಆತಂಕ ಎದುರಾಗಿದೆ. ತಮ್ಮ ಸಂಬಂಧಿಕರನ್ನು ನೋಡಲು ಹೋಗಲಾರದೆ, ಪರಿತಪಿಸುವಂತಾಗಿದೆ. ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಯಾರೂ ಭಾರತಕ್ಕೆ ಬರುವುದಾಗಲೀ ಇಲ್ಲಿಂದ ಅವರನ್ನು ತಲುಪುವುದಾಗಲೀ ಸಾಧ್ಯವಾಗುತ್ತಿಲ್ಲ. ಇದರಿಂದ ವಿದೇಶಗಳಲ್ಲಿರುವವರು ಅಲ್ಲಿಯೇ ಅನಿವಾರ್ಯವಾಗಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಿದೇಶಗಳಲ್ಲಿರುವ ಸಂಬಂಧಿಕರಲ್ಲಿ ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.
ಸ್ವದೇಶಕ್ಕೆ ಮರಳಲು ಬಯಸಿರುವ ವಲಸಿಗರನ್ನು ಕೊಂಡೊಯ್ಯದ ದೇಶಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಯುಎಇ ಮುಂದಾಗಿದೆ. ಅಂತಹ ದೇಶಗಳೊಂದಿಗಿನ ಸಹಕಾರ ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆ ಮರುಚಿಂತನೆ ನಡೆಸುವುದಾಗಿ ಯುಎಇ ಎಚ್ಚರಿಸಿದೆ.