ರಿಯಾದ್: ಸೌದಿ ಅರೇಬಿಯಾದಲ್ಲಿ ಕೋವಿಡ್ ಸೋಂಕು ಏರಿಕೆಯಾಗುತ್ತಿದ್ದು, ತಡೆಗಟ್ಟುವ ಕ್ರಮಗಳನ್ನು ಸರಕಾರ ಮತ್ತಷ್ಟು ಕಠಿಣಗೊಳಿಸಿದೆ.
ಹೂಸತಾಗಿ 429 ಮಂದಿಗೆ ಇಂದು ಕೊರೋನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4462 ಕ್ಕೆ ಏರಿದೆ. ಇಂದು 7 ಮಂದಿ ಮೃತಪಟ್ಟಿದ್ದಾರೆ. ಬಲಿಯಾದವರ ಸಂಖ್ಯೆ 59 ತಲುಪಿದೆ.
ಪೂರ್ಣ ಪ್ರಮಾಣದ ಕರ್ಫ್ಯೂ ಘೋಷಿತ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಿಳಿಯಬಾರದೆಂದು ಕಟ್ಟು ನಿಟ್ಟಿನ ಆದೇಶವನ್ನು ನೀಡಲಾಗಿದೆ. ಈ ಪ್ರದೇಶದವರಿಗೆ ಆಹಾರ ಪದಾರ್ಥಗಳನ್ನು ಮನೆಗಳಿಗೇ ತಲುಪಿಸಲಾಗುತ್ತದೆ.
ಕಾರ್ಮಿಕ ಶಿಬಿರಗಳಲ್ಲಿ ಪುನರ್ವಸತಿ:
ಕೋವಿಡ್ ಸೋಂಕು ಹರಡಿಕೊಂಡಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಸೌಕರ್ಯ ಇಲ್ಲದ ಕಾರ್ಮಿಕ ಶಿಬಿರಗಳಲ್ಲಿರುವವರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪೂರ್ವ ಪ್ರಾಂತ್ಯದ ಹದಿನೈದು ಶಾಲೆಗಳಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿವಿಧ ಶಿಬಿರಗಳಲ್ಲಿರುವ ಎಂಭತ್ತು ಶೇಕಡಾ ಕಾರ್ಮಿಕರನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು.
ಈ ವರ್ಷ ರಂಝಾನ್‌ನಲ್ಲೂ ಮನೆಗಳಲ್ಲೇ ನಮಾಝ್
ಈ ವರ್ಷ ಸೌದಿಯ ಮಸೀದಿಗಳಲ್ಲಿ ಯಾವುದೇ ಪ್ರಾರ್ಥನೆ ಇರುವುದಿಲ್ಲ ಎಂದು ಇಸ್ಲಾಮಿಕ್ ವ್ಯವಹಾರಗಳ ಸಚಿವರು ಹೇಳಿದ್ದಾರೆ. ಇನ್ನು ಹದಿನಾಲ್ಕು ದಿನಗಳು ಮಾತ್ರ ರಂಝಾನ್‌ಗೆ ಉಳಿದಿದ್ದು, ಅಷ್ಟರೊಳಗೆ ಕೋವಿಡ್ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆಯಿಲ್ಲ ಎಂದು ಅವರು ಹೇಳಿದರು.
ಮದೀನಾದಲ್ಲಿ ವ್ಯಾಪಕ ಪರಿಶೋಧನೆ
ಆರೋಗ್ಯ ಸಚಿವಾಲಯವು ಮದೀನಾದಲ್ಲಿ ಸಂಪೂರ್ಣ ಲಾಕ್-ಡೌನ್ ಘೋಷಿಸಿರುವ ಪ್ರದೇಶದಲ್ಲಿರುವವರ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಈ ಕ್ರಮವು ಕೋವಿಡ್-19 ರಕ್ಷಣಾ ಪ್ರಯತ್ನದ ಭಾಗವಾಗಿದೆ. ಕರ್ಫ್ಯೂ ಉಲ್ಲಂಘಿಸಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಲಂಚ ನೀಡಿದವರನ್ನೂ ಬಂಧಿಸಲಾಗಿದೆ.
ನಕಲಿ ಸುದ್ದಿಗಳಿಗೆ ಭಾರೀ ಬೆಲೆ ತೆತ್ತ ಬೇಕಾದೀತು ಎಚ್ಚರಿಕೆ
ಸೌದಿಯಲ್ಲಿರುವ ಅನಿವಾಸಿ ವಲಸಿಗರನ್ನು ಆರು ತಿಂಗಳ ವರೆಗೆ ರಜೆ ನೀಡಿ ಊರಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎನ್ನುವ ನಕಲಿ ಸುದ್ದಿ ಹರಡುತ್ತಿದೆ. ಸಚಿವಾಲಯ ಅಂತಹ ಯಾವುದೇ ಪ್ರಕಟಣೆಗಳನ್ನು ನೀಡಿಲ್ಲ. ವಿದೇಶಿಯರನ್ನು ಊರಿಗೆ ಕಳುಹಿಸಲಾಗುವುದು ಎಂದು ಸೌದಿ ದೊರೆಯ ಹೆಸರಿನಲ್ಲಿ ವದಂತಿ ಹಬ್ಬಿತ್ತು. ನಕಲಿ ಸುದ್ದಿಗಳನ್ನು ಪ್ರಕಟಿಸುವುದು ಮತ್ತು ರವಾನಿಸುವುದು ದೊಡ್ಡ ದಂಡ ಮತ್ತು ಜೈಲು ಶಿಕ್ಷೆ ಲಭಿಸಬಹುದಾದ ಅಪರಾಧವಾಗಿದೆ.