janadhvani

Kannada Online News Paper

‘ಥ್ಯಾಂಕ್ಸ್ ಇಂಡಿಯಾ’ ಔಷಧ ರಫ್ತಿಗೆ ಅನುಮತಿ- ಟ್ರಂಪ್ ಧನ್ಯವಾದ

ವಾಷಿಂಗ್ಟನ್: ಕರೋನವೈರಸ್ COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಎಂದು ಕರೆಯಲ್ಪಡುವ ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಅನುಮತಿ ನೀಡಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಭಾರತದ ಈ ನಿರ್ಧಾರವನ್ನು ಎಂದಿಗೂ ಮರೆಯುವುದಿಲ್ಲ ಎಂದೂ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

“ಕಷ್ಟದ ಸಮಯದಲ್ಲಿ ಸ್ನೇಹಿತರ ನಡುವೆ ಸಹಕಾರದ ಅಗತ್ಯವಿದೆ. ಎಚ್‌ಸಿಕ್ಯೂ (HCQ) ನಿರ್ಧಾರಕ್ಕೆ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು. ಭಾರತದ ಸಹಕಾರವನ್ನು ಎಂದಿಗೂ ಮರೆಯಲಾಗುವುದಿಲ್ಲ! ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿದ ನಿಮ್ಮ ಪ್ರಬಲ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದಗಳು!” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಡೊನಾಲ್ಡ್‌ ಟ್ರಂಪ್‌ ಅವರ ಮಾತುಗಳನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಇಂಥ ಸಂದರ್ಭಗಳು ಸ್ನೇಹಿತರನ್ನು ಹತ್ತಿರಕ್ಕೆ ತರುತ್ತವೆ. ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಎಂದಿಗಿಂತಲೂ ಈಗ ಸದೃಢವಾಗಿದೆ. ಕೊವಿಡ್‌–19 ವಿರುದ್ಧದ ಮಾನವೀಯ ಹೋರಾಟಕ್ಕೆ ಭಾರತ ತನ್ನಿಂದ ಸಾಧ್ಯವಾಗುವ ಎಲ್ಲ ರೀತಿಯ ನೆರವನ್ನೂ ನೀಡುತ್ತದೆ. ಕೋವಿಡ್‌–19 ಅನ್ನು ಎಲ್ಲರೂ ಒಟ್ಟಾಗಿ ಗೆಲ್ಲೋಣ,’ ಎಂದು ಟ್ವೀಟ್‌ ಮಾಡಿದ್ದಾರೆ.

ತನ್ನ ಕೋರಿಕೆಯ ನಡುವೆಯೂ ಹೈಡ್ರೋಕ್ಲೋರೊಕ್ವಿನ್‌ ರಫ್ತು ನಿರ್ಬಂಧವನ್ನು ತೆರವು ಮಾಡದ ಭಾರತದ ಕ್ರಮವನ್ನು ಮಂಗಳವಾರ ಆಕ್ಷೇಪಿಸಿದ್ದ ಡೊನಾಲ್ಡ್‌ ಟ್ರಂಪ್‌, ಇದಕ್ಕೆ ಪ್ರತೀಕಾರ ಪಡೆಯುವುದಾಗಿ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ರಫ್ತು ನಿರ್ಬಂಧ ತೆರವು ಮಾಡಿದ ಭಾರತ ಔಷಧದ ಅಗತ್ಯವಿರುವ ರಾಷ್ಟ್ರಗಳಿಗೆ ಹೈಡ್ರೋಕ್ಲೋಕ್ವಿನ್‌ ಪೂರೈಸುವ ನಿರ್ಧಾರ ಕೈಗೊಂಡಿತ್ತು.

error: Content is protected !! Not allowed copy content from janadhvani.com