ದುಬೈ: ಕೆಲವು ವೈಮಾನಿಕ ಕಂಪೆನಿಗಳು ಭಾರತಕ್ಕೆ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿದ್ದರೂ, ಪ್ರಯಾಣಿಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಅನಿಶ್ಚಿತತೆ ಉಳಿದಿದೆ. ಪ್ರಯಾಣಿಕರನ್ನು ಭಾರತಕ್ಕೆ ಕರೆದೊಯ್ಯುವ ಬಗ್ಗೆ ಸರಕಾರದಿಂದ ಈ ವರೆಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ದುಬೈನ ಭಾರತೀಯ ಕಾನ್ಸುಲ್ ಜನರಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊಚ್ಚಿ ಮತ್ತು ಕೋಝಿಕೋಡ್ ಸೇರಿದಂತೆ ಭಾರತದ ಎಂಟು ನಗರಗಳಲ್ಲಿ ಫ್ಲೈ ದುಬೈ ಬುಕಿಂಗ್ ಪ್ರಾರಂಭಿಸಲಾಗಿದೆ. ಈ ತಿಂಗಳ 15ರಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವುದಾಗಿ ಅದು ಪ್ರಕಟಿಸಿದೆ. ಆದರೆ, ಭಾರತದಲ್ಲಿ ಲಾಕ್‌ಡೌನ್ ಮುಂದುವರಿಸಲಾಗುತ್ತದೆಯೇ, ವಿಮಾನ ಸೇವೆಯನ್ನು ನಿಷೇಧಿಸಲಾಗುತ್ತದೆಯೇ ಮತ್ತು ವಿಮಾನ ಇಳಿಯಲು ಸಾಧ್ಯವಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಮೊದಲು ಯುಎಇಯಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕಳುಹಿಸಲು ಯೋಜಿಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದ್ದವು. ಭಾರತ ಸರಕಾರದಿಂದ ನಾಗರಿಕರನ್ನು ಮರಳಿಸುವ ಬಗ್ಗೆ ಯಾವುದೇ ಮಾರ್ಗದರ್ಶನವಿಲ್ಲ ಎಂದು ದುಬೈನ ಭಾರತೀಯ ಕಾನ್ಸುಲ್ ಜನರಲ್ ವಿಪುಲ್ ತಿಳಿಸಿದರು.
ಬುಕಿಂಗ್ ಪ್ರಾರಂಭವಾದ ನಂತರ, ಟಿಕೆಟ್ ಖರೀದಿಸುವವರ ಸಂಖ್ಯೆಯು ಏರಿದೆ. ವೆಬ್ಸೈಟ್‌ನಲ್ಲಿ ಇರುವ ಮಾಹಿತಿ ಪ್ರಕಾರ ಮೇ 2 ರವರೆಗಿನ ಟಿಕೇಟ್ ಮಾರಾಟವಾಗಿದೆ. ಮೇ 2 ರಂದು, ಕೊಚ್ಚಿಗೆ ಏಕಮುಖ ಹಾರಾಟಕ್ಕೆ 1,325 ದಿರ್ಹಂ ಅಥವಾ 27,000 ರೂ. ವೆಚ್ಚವಾಗಿದೆ. ಫ್ಲೈ ದುಬೈ ಭಾರತ ಹೊರತಾಗಿ ಪಾಕಿಸ್ತಾನಕ್ಕೂ ವಿಮಾನ ಕಾಯ್ದಿರಿಸಲು ಪ್ರಾರಂಭಿಸಿದೆ.