ಬೆಂಗಳೂರು: ಕೊರೊನಾ ವಿರುದ್ಧ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿರುವ ವೇಳೆ ಪೊಲೀಸರು ಅನಗತ್ಯ ಲಾಠಿ ಚಾರ್ಜ್ ಮಾಡುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ದಿನಬಳಕೆಯ ವಸ್ತು ತರಲು ಹೋದರೂ ಪೊಲೀಸರು ಲಾಠಿ ಬೀಸಿ ಜನರನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಎನ್.ಪಿ. ಅಮೃತೇಶ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ.
ಈ ಪಿಐಎಲ್ ಕುರಿತು ಮಾ. 30ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಜೆ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ, ಮಾನವ ಹಕ್ಕುಗಳ ಆಯೋಗ ಹಾಗೂ ಡಿಜಿಪಿ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
‘‘ಸೋಂಕು ಹರಡುವುದನ್ನು ತಡೆಗಟ್ಟಲು ಮಾ. 22 ರಂದು ಪ್ರಧಾನಿಯವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ವಿಧಿಸಲಾಗಿದೆ. ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅಡ್ಡಿಯಿಲ್ಲ ಎಂದು ಸರಕಾರಗಳು ಹೇಳಿವೆ.
ಆದರೆ, ಹಾಲು, ಹಣ್ಣು, ತರಕಾರಿ ತರಲು ಹೋಗುವವರ ಮೇಲೂ ಲಾಠಿ ಬೀಸುತ್ತಿದ್ದಾರೆ. ಹಾಗಾಗಿ, ಸಿಕ್ಕ ಸಿಕ್ಕವರ ಮೇಲೆ ಮೇಲೆ ಲಾಠಿ ಎತ್ತದಂತೆ ಸೂಕ್ತ ನಿರ್ದೇಶನ ನೀಡಬೇಕು’’ ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.