ವಿಟ್ಲ,ಮಾ.25: ಕೊರೋನ ವೈರಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಬರಹ ಹಾಕಿ ಸಮಾಜದ ಸ್ವಾಸ್ಥ್ಯ ಕೆಡವಲು ಪ್ರಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ ವಿಟ್ಲ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜಯಕರ ಆಚಾರ್ಯ ಬಂಧಿತ ಆರೋಪಿ.
ವಿಟ್ಲ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ, ಪ್ರಚೋದನಕಾರಿ ಬರಹಕ್ಕೆ ಕಾಮೆಂಟ್ ಹಾಕಿದ ವಿಟ್ಲ ಮೇಗಿನಪೇಟೆ ಶಾಲಾ ಬಳಿಯ ನಿವಾಸಿ, ಮಂಗಳೂರು ಎಲ್ ಐ ಸಿ ಉದ್ಯೋಗಿ ರೋಹಿತ್ ಸಹಿತ ಮೂವರನ್ನು ಠಾಣೆಗೆ ಕರೆದುಕೊಂಡು ಬಂದ ಠಾಣೆ ಎಸ್ಸೈ ವಿನೋದ್ ರೆಡ್ಡಿ ಎಚ್ಚರಿಕೆ ನೀಡಿ, ಮುಚ್ಚಲಿಕೆ ಬರೆಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
“ಅಲ್ಲಾಹನ ದುಬೈಯಿಂದ ಬಂದವರಿಂದ ಪವಿತ್ರ ಭಾರತದ ನೆಲದಲ್ಲಿ ಕೊರೋನ ವೈರಸ್ ಹರಡುತ್ತಿದೆ. ದುಬೈಯಿಂದ ಕೇರಳಕ್ಕೆ ಬಂದಿರುವ ಎಲ್ಲಾ ಹರಾಮಿ ಮುಲ್ಲಾಗಳಿಗೂ ಕೊರೋನ ವೈರಸ್ positive. ಹಿಂದೂಗಳೇ ಯೋಚಿಸಿ ಪವಿತ್ರ ಭಾರತಕ್ಕೆ ಕಂಟಕ ಎಲ್ಲಿಂದ ಸುರುವಾಗುವುದು ಎಂದು. ಏಸು, ಅಲ್ಲಾಹ್ ಇವರಿಂದಲೇ ಭಾರತಕ್ಕೆ ಕಂಟಕ. ಇವರ ಬೇರು ಭಾರತದಲ್ಲಿ ಕಿತ್ತು ಬಿಸಾಕಬೇಕಿದೆ” ಹೀಗೆಂದು ಆರೋಪಿ ಜಯಕರ ಆಚಾರ್ಯ ಫೇಸ್ಸುಕ್ ನಲ್ಲಿ ಕಮೆಂಟ್ ಮಾಡಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.
“ಹಂದಿಗಳೆಲ್ಲಾ ನಾಳೆಯಿಂದ ಪ್ರತಿಭಟನೆ ಮಾಡಲಿ” ಎಂದು ರೋಹಿತ್ ವಿಟ್ಲ ಎಂಬಾತ ಕಮೆಂಟು ಹಾಕಿದ್ದ. ಇಂತಹ ಅವಹೇಳನಕಾರಿ ಕಮೆಂಟು ಮಾಡಿರುವ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಫೇಸ್ಬುಕ್ ಸ್ಕ್ರೀನ್ ಶಾಟ್ ದಾಖಲೆಯೊಂದಿಗೆ ವಿಟ್ಲ ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಜಯಕರ ಆಚಾರ್ಯ ಎಂಬಾತ ತಾನು ಹಾಕಿದ ಕಮೆಂಟನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸುವ ವೀಡಿಯೋವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ.