ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ತನಿಖೆ ಪ್ರಗತಿಯಲ್ಲಿದ್ದು, ಮಾ.24ರೊಳಗೆ ತನಿಖೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಮ್ಯಾಜಿಸ್ಟ್ರೇಟ್ ತನಿಖೆ ಪ್ರಗತಿಯಲ್ಲಿದ್ದು, ಈವರೆಗೆ 74 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಾ.24ರೊಳಗೆ ತನಿಖೆ ಪೂರ್ಣಗೊಳ್ಳಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಘಟನೆಯಲ್ಲಿ ಸಾವಿಗೀಡಾದವರ ಕುಟುಂಬದವರು ಹಾಗೂ ಗಾಯಾಳುಗಳು ಪೊಲೀಸರ ವಿರುದ್ಧ ನೀಡಿರುವ ದೂರುಗಳ ಬಗ್ಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಅದರ ತನಿಖೆಯೂ ನಡೆಯತ್ತಿದೆ ಎಂದರು.
ಅದಕ್ಕೆ ನ್ಯಾಯಪೀಠ, ಹಾಗಿದ್ದರೆ, ಸಂತ್ರಸ್ತರು ಕೊಟ್ಟಿರುವ ದೂರು ಸುಳ್ಳು ಎಂದು ಪೊಲೀಸ್ ಠಾಣಾಧಿಕಾರಿ ಬರೆದುಕೊಟ್ಟಿರುವ ಹಿಂಬರಹ ವಾಪಸ್ ಪಡೆದುಕೊಳ್ಳಬೇಕಾಗುತ್ತದೆ. ಪ್ರಾಥಮಿಕ ತನಿಖೆಯನ್ನೇ ನಡೆಸದೆ ದೂರು ಸುಳ್ಳು ಎಂಬ ತೀರ್ಮಾನಕ್ಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತಲ್ಲದೆ, ಹಿಂಬರಹ ವಾಪಸ್ ಪಡೆದುಕೊಳ್ಳುವಂತೆ ನಿರ್ದೇಶಿಸಿತು.
ಪ್ರಮಾಣಪತ್ರ ಸಲ್ಲಿಕೆ: ಹೈಕೋರ್ಟ್ ಕಳೆದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನದಂತೆ, ಘಟನೆಯ ದಿನದ ಎಲ್ಲ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕು. ಎಷ್ಟು ಸಿಸಿಟಿವಿ ದೃಶ್ಯಾವಳಿಗಳಿವೆ, ಎಷ್ಟು ಕ್ಯಾಮರಾಗಳಲ್ಲಿ ಸೆರೆ ಹಿಡಿಯಲಾಗಿದೆ, ದೃಶ್ಯಗಳ ಗುಣಮಟ್ಟದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಪ್ರಮಾಣಪತ್ರ ಸಲ್ಲಿಸಿದರು. ಸಾರ್ವಜನಿಕ ಪ್ರಕಟಣೆ ನೀಡಿದ ಬಳಿಕ, ಒಬ್ಬರು 50 ವಿಡಿಯೋ ದೃಶ್ಯಾವಳಿಗಳ ವಿವರಗಳನ್ನು ಸಿ.ಡಿ ಹಾಗೂ ಪೆನ್ಡ್ರೖೆವ್ನಲ್ಲಿ ಸಲ್ಲಿಸಿದ್ದಾರೆ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.