ಬೀಜಿಂಗ್, ಫೆ.8:ಚೀನಾದಲ್ಲಿ ಮಾರಣಾಂತಿಕ ಕರೋನಾ ಸೋಂಕಿನ ಪ್ರಕಂಪನಗಳು ದಿನ ದಿನಕ್ಕೂ ಹೆಚ್ಚುತ್ತಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 722 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಪ್ರಾಂತೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ. ಚೀನಾ ಮಾತ್ರವಲ್ಲದೆ ವೈರಾಣುವಿನಿಂದ ಜಗತ್ತಿನ ವಿವಿಧ ದೇಶಗಳ ಜನರು ಸಾವನ್ನಪ್ಪುತ್ತಿದ್ದಾರೆ.
ಸೋಂಕಿತರ ಸಂಖ್ಯೆ 34,546 ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಧ್ಯರಾತ್ರಿ ವೇಳೆಗೆ 31 ಪ್ರಾಂತ್ಯಗಳಲ್ಲಿ 34,546 ಪ್ರಕರಣಗಳಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿನಿಂದಾಗಿ ನ್ಯುಮೋನಿಯಾ ದೃಢಪಟ್ಟಿದೆ.
ಕರೋನಾ ವೈರಸ್ ಗೆ ಒಳಗಾಗಿದ್ದ ಅಮೆರಿಕ ರಾಷ್ಟ್ರೀಯ (60) ಫೆಬ್ರವರಿ 6 ರಂದು ಚೀನಾದ ವುಹಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೀಜಿಂಗ್‌ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯ ವಕ್ತಾರರು ಶನಿವಾರ ಈ ವಿಷಯ ತಿಳಿಸಿದ್ದಾರೆ.ಸಂತ್ರಸ್ತ ಕುಟುಂಬಕ್ಕೆ ಅವರು ತೀವ್ರ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆದೇ ರೀತಿ ಜಪಾನ್ ನಾಗರೀಕರೊಬ್ಬರು ವುಹಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವಾಗ ಮೃತಪಟ್ಟಿದ್ದಾರೆ. ಆದರೆ ಇವರಲ್ಲಿ ಕರೋನಾ ವೈರಸ್ ದೃಢಪಟ್ಟಿರಲಿಲ್ಲ. ತೀವ್ರ ನ್ಯುಮೋನಿಯಾ ಸಾವಿಗೆ ಕಾರಣವಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಕೊರೊನಾ ವೈರಾಣು ಸೋಂಕು ಡಿಸೆಂಬರ್ ಅಂತ್ಯದ ವೇಳೆಗೆ ಚೀನಾದ ಹುಬೈ ಪ್ರಾಂತ್ಯದಲ್ಲಿನ ವುಹಾನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಈಗ 25 ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಳೆದ ವಾರ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿತು.